ಮಮತಾ ಬ್ಯಾನರ್ಜಿ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ: ಆಸ್ಪತ್ರೆ
ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಗಾಯಗೊಂಡು ಕೋಲ್ಕತಾದ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
Published: 12th March 2021 12:50 PM | Last Updated: 12th March 2021 12:53 PM | A+A A-

ಮಮತಾ ಬ್ಯಾನರ್ಜಿಯವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರು.
ಕೋಲ್ಕತಾ: ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಗಾಯಗೊಂಡು ಕೋಲ್ಕತಾದ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಯವರು ಗುರುವಾರ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ದಾರೆ, ಚಿಕಿತ್ಸೆಗೂ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ನಮ್ಮ ವೈದ್ಯರ ತಂಡ ಮುಖ್ಯಮಂತ್ರಿಯವರನ್ನು ಪರೀಕ್ಷಿಸಿದೆ. ಅವರ ಎಡ ಕಾಲಿಗೆ ಆಗಿರುವ ಗಾಯ ವಾಸಿಯಾಗಿರುವುದನ್ನು ಪರೀಕ್ಷಿಸಲು, ಕಾಲಿಗೆ ಹಾಕಿದ್ದ ತಾತ್ಕಾಲಿಕ ಪ್ಲ್ಯಾಸ್ಟರ್ ಅನ್ನು ತೆಗೆಯಬೇಕಿದೆ. ಕೆಲವೊಂದು ವೈದ್ಯಕೀಯ ಪರೀಕ್ಷೆಗಳನ್ನು ಮಾಡಬೇಕಿದೆ‘ ಎಂದು ಹಿರಿಯ ವೈದ್ಯರೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಎಡಗಾಲಿನ ಪಾದದ ಬಳಿ ಊತ ಬಂದಿದೆ. ಕುತ್ತಿಗೆ, ಭುಜ ಮತ್ತು ಸೊಂಟದಲ್ಲಿನ ನೋವು ಕಡಿಮೆಯಾಗಿದೆ ಎಂದು ಮಮತಾ ಬ್ಯಾನರ್ಜಿಯವರು ಹೇಳಿದ್ದಾರೆ. ‘ಇಂತಹ ಪರಿಸ್ಥಿತಿ ಎದುರಿಸುತ್ತಿರುವ ಎಲ್ಲ ರೋಗಿಗಳಿಗೆ ಸಾಮಾನ್ಯವಾಗಿ ಎರಡರಿಂದ ಮೂರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತೇವೆ‘ ಎಂದು ಅವರು, ‘ಮಮತಾ ಬ್ಯಾನರ್ಜಿ ಅವರಿಗೆ ಶೀಘ್ರದಲ್ಲೇ ವಿಶಿಷ್ಟ ಗಾಲಿಕುರ್ಚಿಯನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ‘ ಎಂದು ವೈದ್ಯರು ಹೇಳಿದ್ದಾರೆ.
ಇದೇ ವೇಳೆ ಮಮತಾ ಬ್ಯಾನರ್ಜಿಯವರನ್ನು ಯಾವಾಗ ಆಸ್ಪತ್ರೆಯಿಂದ ಬಿಡುಗಡೆಗೊಳಿಸಬಹುದು‘ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ‘ಇಂದು ಬೆಳಿಗ್ಗೆ ನಮ್ಮ ವೈದ್ಯರ ತಂಡ ಅವರ ಆರೋಗ್ಯದ ಸ್ಥಿತಿಯನ್ನು ಪರೀಕ್ಷಿಸಿದೆ. ಈ ವರದಿಯ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ‘ ಎಂದು ತಿಳಿಸಿದ್ದಾರೆ.