
ಸಂಗ್ರಹ ಚಿತ್ರ
ಬಿಜಾಪುರ್: ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ನಕ್ಸಲರ ಮಹಾ ಎಡವಟ್ಟು ಮಾಡಿಕೊಂಡಿದ್ದು, ತಾವೇ ಇಟ್ಟ ಬಾಂಬ್ ಸ್ಫೋಟಗೊಂಡ ಪರಿಣಾಮ ಓರ್ವ ನಕ್ಸಲ್ ಸಾವನ್ನಪ್ಪಿದ್ದಾನೆ.
ಛತ್ತೀಸ್ ಘಡದ ಬಿಜಾಪುರದ ಗಾಯತಪಾರದಲ್ಲಿ ಈ ಘಟನೆ ನಡೆದಿದ್ದು, ಐಇಡಿ ಬಾಂಬ್ ಅಳವಡಿಸುವಾಗ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಓರ್ವ ನಕ್ಸಲೀಯ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಸ್ತಾರ್ ಐಜಿ ಪಿ ಸುಂದರ್ ರಾಜ್ ಅವರು, 'ರಸ್ತೆ ಭದ್ರತಾ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಹಾನಿ ಮಾಡುವ ಉದ್ದೇಶದಿಂದ ಪಶ್ಚಿಮ ಬಸ್ತರ್ ವಿಭಾಗದ ಸಿಪಿಐ ಮಾವೋವಾದಿ ಕಾರ್ಯಕರ್ತರು ಗಾಯತಪಾರ ಬಳಿ ಬೆಚಪಾಲ್-ಹುರೆಪಾಲ್ ರಸ್ತೆ (ಪಿಎಸ್ ಮಿರ್ತೂರ್) ಉದ್ದಕ್ಕೂ ಐಇಡಿ ನೆಡಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಐಇಡಿ ಆಕಸ್ಮಿಕವಾಗಿ ಸಕ್ರಿಯಗೊಂಡು ಸ್ಫೋಟ ಸಂಭವಿಸಿತು. ಈ ವೇಳೆ ಓರ್ವ ನಕ್ಸಲೀಯ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.
ಅಂತೆಯೇ ಮೃತ ನಕ್ಸಲ್ ನನ್ನು ಮಿಲಿಟಿಯಾ ಕಮಾಂಡರ್ ಸುನಿಲ್ ಪದಂ ಎಂದು ಗುರುತಿಸಲಾಗಿದೆ. ಐಇಡಿ ಬಾಂಬ್ ಅಳವಡಿಕೆಯಲ್ಲಿ ಈತ ನುರಿತನಾಗಿದ್ದ ಎಂದು ತಿಳಿದುಬಂದಿದೆ. ಇನ್ನು ಸ್ಫೋಟ ಸಂಭವಿಸಿದ ಬೆನ್ನಲ್ಲೇ ಇತರೆ ನಕ್ಸಲರು ಮೃತದೇಹವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಮೃತದೇಹ ಮತ್ತು ಅಲ್ಲಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.