ರಿಯಾ ಚಕ್ರವರ್ತಿಗೆ ಜಾಮೀನು: ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಎನ್ ಸಿಬಿ ಮೇಲ್ಮನವಿ
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಸಂಬಂಧಿತ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಎನ್ ಸಿಬಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ.
Published: 15th March 2021 08:27 PM | Last Updated: 15th March 2021 08:27 PM | A+A A-

ರಿಯಾ ಚಕ್ರವರ್ತಿ
ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಸಂಬಂಧಿತ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಎನ್ ಸಿಬಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬೊಬ್ಡೆ ಮತ್ತು ನ್ಯಾಯಾಧೀಶ ಎಎಸ್ ಬೊಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮಾರ್ಚ್ 18 ರಂದು ಈ ಅರ್ಜಿಯ ವಿಚಾರಣೆ ನಡೆಸಲಿದೆ.
ಕಳೆದ ವರ್ಷ ಅಕ್ಟೋಬರ್ 7 ರಂದು ನಟಿ ರಿಯಾ ಚಕ್ರವರ್ತಿಗೆ ಜಾಮೀನು ಮಂಜೂರು ಮಾಡಿದ್ದ ಬಾಂಬೆ ಹೈಕೋರ್ಟ್, 1 ಲಕ್ಷ ವೈಯಕ್ತಿಕ ಬಾಂಡ್ ಡೆಪಾಸಿಟ್ ಮಾಡುವಂತೆ ನಿರ್ದೇಶಿಸಿತ್ತು. ಆದಾಗ್ಯೂ, ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಕೆಯ ಸಹೋದರ ಶೋಯಿಕ್ ಚಕ್ರವರ್ತಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಆಯಾಮದಲ್ಲಿ ತನಿಖೆಗಾಗಿ ಎನ್ ಸಿಬಿ ಕಳೆದ ವರ್ಷ ಸೆಪ್ಚೆಂಬರ್ ತಿಂಗಳಲ್ಲಿ ರಿಯಾ ಚಕ್ರವರ್ತಿ , ಆಕೆಯ ಸಹೋದರ ಮತ್ತಿತರ ಆರೋಪಿಗಳನ್ನು ಬಂಧಿಸಿತ್ತು.
ಆದಾಗ್ಯೂ, ರಿಯಾ ಚಕ್ರವರ್ತಿ ಮತ್ತಿಬ್ಬರಿಗೆ ಜಾಮೀನು ಮಂಜೂರು ಮಾಡಿದ್ದ ಬಾಂಬೆ ಹೈಕೋರ್ಟ್, ಪಾಸ್ ಪೋರ್ಟ್ ನ್ನು ಎನ್ ಸಿಬಿಗೆ ನೀಡಿ, ವಿಶೇಷ ಎನ್ ಡಿಪಿಎಸ್ ಕೋರ್ಟ್ ನ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ ಎಂದು ನಿರ್ದೇಶನ ನೀಡಿತ್ತು.
ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಜೂನ್ ತಿಂಗಳಲ್ಲಿ ಬಾಂದ್ರಾದಲ್ಲಿನ ತನ್ನ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.