
ಅಮಿತ್ ಶಾ ವಿರುದ್ಧ ತಮ್ಮ ಹತ್ಯೆಗೆ ಷಡ್ಯಂತ್ರ ರೂಪಿಸುತ್ತಿರುವ ಆರೋಪ ಮಾಡಿದ ಮಮತಾ
ಮೀಜಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣಾ ಪ್ರಚಾರಗಳಲ್ಲಿ ಕಡಿಮೆ ಜನರು ಸೇರುತ್ತಿರುವುದರಿಂದ ಹತಾಶಗೊಂಡಿರುವ ಅಮಿತ್ ಶಾ ಹಾಗೂ ಬಿಜೆಪಿ ನಾಯಕರು ತಮ್ಮನ್ನು ಹತ್ಯೆ ಮಾಡುವುದಕ್ಕೆ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ನಾಯಕರು ಟಿಎಂಸಿ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ, ಚುನಾವಣಾ ಆಯೋಗವೂ ಅಮಿತ್ ಶಾ ಸೂಚನೆಯ ಪ್ರಕಾರವೇ ಕೆಲಸ ಮಾಡುತ್ತಿದೆಯೇ ಎಂದು ಅಚ್ಚರಿಯಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಳೆದ ವಾರ ನಂದಿ ಗ್ರಾಮದಲ್ಲಿ ತಾವು ಗಾಯಗೊಂಡ ಬಳಿಕ ತಮ್ಮ ಭದ್ರತಾ ನಿರ್ದೇಶಕ ವಿವೇಕ್ ಸಹಾಯ್ ಅವರನ್ನು ಆಯೋಗ ತೆಗೆದುಹಾಕಿದೆ. "ಅಮಿತ್ ಶಾ ಅವರ ಚುನಾವಣಾ ಪ್ರಚಾರ ಸಭೆಗಳಲ್ಲಿ ಕಡಿಮೆ ಜನರು ಭಾಗವಹಿಸುತ್ತಿರುವುದರಿಂದ ಹತಾಶರಾಗಿದ್ದಾರೆ. ದೇಶವನ್ನು ಮುನ್ನಡೆಸುವ ಬದಲು ಕೋಲ್ಕತ್ತಾದಲ್ಲಿ ಕುಳಿತು ಟಿಎಂಸಿ ನಾಯಕರಿಗೆ ಕಿರುಕುಳ ನೀಡುವುದಕ್ಕೆ ಷಡ್ಯಂತ್ರ ರೂಪಿಸುತ್ತಿದ್ದಾರೆ" ಎಂದು ಮಮತಾ ಬ್ಯಾನರ್ಜಿ ಅಮಿತ್ ಶಾ ವಿರುದ್ಧ ಆರೋಪ ಮಾಡಿದ್ದಾರೆ.
"ಅವರಿಗೆ ಬೇಕಾಗಿರುವುದು ಏನು? ನನ್ನನ್ನು ಹತ್ಯೆ ಮಾಡುವುದೇ? ನನ್ನನ್ನು ಹತ್ಯೆ ಮಾಡುವುದರಿಂದ ಅವರು ಚುನಾವಣೆಯನ್ನು ಗೆಲ್ಲುತ್ತಾರೆಯೇ? ಅವರು ತಪ್ಪು ತಿಳಿದಿದ್ದಾರೆ" ಎಂದು ಸಮಾವೇಶವೊಂದರಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.