ಇಂತಹ ಮನಸ್ಥಿತಿಯಿಂದ ಮಹಿಳೆಯರ ಮೇಲಿನ ಅಪರಾಧಗಳಿಗೆ ಪ್ರಚೋದನೆ: ಉತ್ತರಾಖಂಡ್ ಸಿಎಂ ಹೇಳಿಕೆಗೆ ಜಯಾ ಬಚ್ಚನ್ ತಿರುಗೇಟು
ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರ ಹರಿದ ಜೀನ್ಸ್ ಹೇಳಿಕೆ ಬಗ್ಗೆ ನಟ-ರಾಜಕಾರಣಿ ಜಯಾ ಬಚ್ಚನ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು "ಮಹಿಳೆಯರ ಮೇಲಿನ ಅಪರಾಧಗಳಿಗೆ ಪ್ರಚೋದನೆ ನೀಡುವ ಮನಸ್ಥಿತಿ" ಎಂದು ಹೇಳಿದ್ದಾರೆ.
Published: 18th March 2021 07:36 PM | Last Updated: 18th March 2021 07:50 PM | A+A A-

ಜಯಾ ಬಚ್ಚನ್
ನವದೆಹಲಿ: ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರ ಹರಿದ ಜೀನ್ಸ್ ಹೇಳಿಕೆ ಬಗ್ಗೆ ನಟ-ರಾಜಕಾರಣಿ ಜಯಾ ಬಚ್ಚನ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು "ಮಹಿಳೆಯರ ಮೇಲಿನ ಅಪರಾಧಗಳಿಗೆ ಪ್ರಚೋದನೆ ನೀಡುವ ಮನಸ್ಥಿತಿ" ಎಂದು ಹೇಳಿದ್ದಾರೆ.
"ಇಂತಹ ಹೇಳಿಕೆಗಳು ಮುಖ್ಯಮಂತ್ರಿ ಹುದ್ದೆಯಲ್ಲಿರುವವರಿಗೆ ಸರಿಹೊಂದುವುದಿಲ್ಲ. ಉನ್ನತ ಹುದ್ದೆಗಳಲ್ಲಿರುವವರು ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೊದಲು ಯೋಚಿಸಬೇಕು. ಇಂದಿನ ಕಾಲದಲ್ಲಿ ನೀವು ಇಂತಹ ಮಾತುಗಳನ್ನು ಹೇಳುತ್ತೀರಿ. ಯಾರು ಸುಸಂಸ್ಕೃತರು ಎಂಬುದನ್ನು ನೀವು ಬಟ್ಟೆಯ ಆಧಾರದ ಮೇಲೆ ನಿರ್ಧರಿಸುತ್ತೀರಾ? ಎಂದು ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಪ್ರಶ್ನಿಸಿದ್ದಾರೆ.
"ಇದೊಂದು ಕೆಟ್ಟ ಮನಸ್ಥಿತಿ ಮತ್ತು ಮಹಿಳೆಯರ ಮೇಲಿನ ಅಪರಾಧಗಳನ್ನು ಪ್ರೋತ್ಸಾಹಿಸುತ್ತದೆ" ಎಂದು ಬಾಲಿವುಡ್ ಹಿರಿಯ ನಟಿ ಹೇಳಿದ್ದಾರೆ.
ಹೊಸದಾಗಿ ನೇಮಕಗೊಂಡ ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ಇತ್ತೀಚೆಗೆ ಹರಿದ ಜೀನ್ಸ್ ಧರಿಸಿದ ಮಹಿಳೆಯರು ಸಮಾಜ ಮತ್ತು ಮಕ್ಕಳಿಗೆ ತಪ್ಪು ಸಂದೇಶವನ್ನು ಕಳುಹಿಸುತ್ತಾರೆ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.
ಹರಿದ ಜೀನ್ಸ್ ಧರಿಸುವ ಮಹಿಳೆಯರು ಸಮಾಜಕ್ಕೆ ಏನು ಸಂದೇಶ ನೀಡುತ್ತಾರೆ? ಹರಿದ ಜೀನ್ಸ್ ಧರಿಸುವಿಕೆ ಇದ್ಯಾವ ಸಂಸ್ಕೃತಿ ಎಂದು ರಾವತ್ ಪ್ರಶ್ನಿಸಿದ್ದಾರೆ. ಈ ಜೀವನಶೈಲಿ ಪೋಷಕರ ಮೇಲೆ ನಿರ್ಧರಿತವಾಗಿರುತ್ತೆ ಎಂದಿದ್ದಾರೆ.