ತಿಂಗಳಿಗೆ 100 ಕೋಟಿ ರೂ ಲಂಚ ಸಂಗ್ರಹಿಸಿ ಕೊಡುವಂತೆ ಗೃಹ ಮಂತ್ರಿಗಳ ಆದೇಶವಿತ್ತು: 'ಮಹಾ' ಮಾಜಿ ಪೊಲೀಸ್ ಆಯುಕ್ತರ ಸ್ಫೋಟಕ ಹೇಳಿಕೆ

ತಿಂಗಳಿಗೆ 100 ಕೋಟಿ ರೂ ಲಂಚ ಸಂಗ್ರಹಿಸಿ ಕೊಡುವಂತೆ ಗೃಹ ಮಂತ್ರಿಗಳ ಆದೇಶವಿತ್ತು ಎಂದು ಮಹಾರಾಷ್ಟ್ರ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Published: 20th March 2021 11:42 PM  |   Last Updated: 20th March 2021 11:42 PM   |  A+A-


Param Bir Singh

ಪರಮ್ ಬೀರ್ ಸಿಂಗ್

Posted By : Srinivasamurthy VN
Source : PTI

ಮುಂಬೈ: ತಿಂಗಳಿಗೆ 100 ಕೋಟಿ ರೂ ಲಂಚ ಸಂಗ್ರಹಿಸಿ ಕೊಡುವಂತೆ ಗೃಹ ಮಂತ್ರಿಗಳ ಆದೇಶವಿತ್ತು ಎಂದು ಮಹಾರಾಷ್ಟ್ರ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕ ವಾಹನದ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಮುಂಬೈ ನಗರ ಪೊಲೀಸ್‌ ಆಯುಕ್ತರಾಗಿದ್ದ ಪರಮ್ ಬೀರ್ ಸಿಂಗ್ ಅವರನ್ನು ಗೃಹ ರಕ್ಷಕ ದಳದ ಮುಖ್ಯಸ್ಥರನ್ನಾಗಿ ಗುರುವಾರವಷ್ಟೇ ವರ್ಗಾವಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಿಂಗ್ ಅವರು ವಾಜೆ ಹಾಗೂ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪ್ರತಿ ತಿಂಗಳೂ 100 ಕೋಟಿ ರೂ ಲಂಚ ಸಂಗ್ರಹಿಸಿ ಕೊಡುವಂತೆ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಸೂಚಿಸಿದ್ದರು ಎಂದು ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಆರೋಪಿಸಿದ್ದಾರೆ. ಗೃಹ ಸಚಿವರ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೂ ಪರಮ್ ಬೀರ್ ಸಿಂಗ್ ಪತ್ರ ಬರೆದಿದ್ದಾರೆ.

'ತಿಂಗಳಿಗೆ 100 ಕೋಟಿ ರೂ ಲಂಚ ಸಂಗ್ರಹಿಸುವಂತೆ ಗೃಹ ಸಚಿವರು ಸಚಿನ್ ವಾಜೆ ಅವರಿಗೆ ಗುರಿ ನಿಗದಿಪಡಿಸಿದ್ದರು. ಈ ಗುರಿ ತಲುಪಲು ಸುಮಾರು 1,750 ಬಾರ್‌ ಗಳು, ರೆಸ್ಟೋರೆಂಟ್‌ಗಳು ಹಾಗೂ ಇತರ ಸಂಸ್ಥೆಗಳಿವೆ ಎಂದು ಗೃಹ ಸಚಿವರು ವಾಜೆ ಅವರಿಗೆ ತಿಳಿಸಿದ್ದರು. ಪ್ರತಿಯೊಂದರಿಂದಲೂ ತಲಾ 2ರಿಂದ 3 ಲಕ್ಷ ರೂ ನತೆ ಸಂಗ್ರಹಿಸಿದರೆ ತಿಂಗಳ ಸಂಗ್ರಹ ಸುಮಾರು 40 ರಿಂದ 50 ಕೋಟಿ ರೂ ಆಗಬಹುದು. ಬಾಕಿ ಉಳಿದ ಮೊತ್ತ ಇತರೆ ಮೂಲಗಳಿಂದ ಸಂಗ್ರಹಿಸಬಹುದು ಎಂದು ಸಚಿವರು ಹೇಳಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಇನ್ನು ತಮ್ಮ ಆರೋಪದ ಬಗ್ಗೆ ಈಗಾಗಲೇ ಪರಮ್ ಬೀರ್ ಸಿಂಗ್ ಸಿಎಂ ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ನಡೆದಿದ್ದ ವಾಟ್ಸಪ್ ಚಾಟ್ ಮಾಹಿತಿಗಳನ್ನೂ ಪರಮ್ ಬೀರ್ ಸಿಂಗ್ ಹಂಚಿಕೊಂಡಿದ್ದಾರೆ.  ಈ ಮಧ್ಯೆ, ತಕ್ಷಣವೇ ದೇಶ್‌ಮುಖ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಆರೋಪ ನಿರಾಕರಿಸಿದ ದೇಶ್‌ಮುಖ್
ತಮ್ಮ ವಿರುದ್ಧ ಪರಮ್ ಬೀರ್ ಸಿಂಗ್ ಮಾಡಿರುವ ಆರೋಪಗಳನ್ನು ದೇಶ್‌ಮುಖ್ ಅಲ್ಲಗಳೆದಿದ್ದು, 'ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ವಾಹನ ಇರಿಸಿರುವುದು ಮತ್ತು ಮನ್ಸುಖ್ ಹಿರೇನ್ ಹತ್ಯೆಯಲ್ಲಿ ಸಚಿನ್ ವಾಜೆ ಶಾಮೀಲಾಗಿರುವುದು ಸ್ಪಷ್ಟವಾಗುತ್ತಿದೆ. ಇದು ಪರಮ್ ಬೀರ್ ಸಿಂಗ್ ಅವರನ್ನೂ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ರಕ್ಷಿಸಿಕೊಳ್ಳುವುದಕ್ಕಾಗಿ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ದೇಶ್‌ಮುಖ್ ಟ್ವೀಟ್ ಮಾಡಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp