ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಪರಮ್ ಬಿರ್ ಸಿಂಗ್ ಪತ್ರ, ಉದ್ಧವ್ ಠಾಕ್ರೆ ರಾಜೀನಾಮೆಗೆ ಬಿಜೆಪಿ ಆಗ್ರಹ

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಪತ್ರ ಸೋಮವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು.

Published: 22nd March 2021 04:26 PM  |   Last Updated: 22nd March 2021 04:49 PM   |  A+A-


lokasbha

ಲೋಕಸಭೆ

Posted By : Lingaraj Badiger
Source : PTI

ನವದೆಹಲಿ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಪತ್ರ ಸೋಮವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು.

ಇಂದು ಲೋಕಸಭೆಯಲ್ಲಿ ಶಿವಸೇನೆ ಹಾಗೂ ಎನ್ ಸಿಪಿಯ ಪ್ರತಿಭಟನೆ ನಡುವೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಮನೋಜ್ ಕೊಟಕ್ ಅವರು, ಪರಮ್ ಬಿರ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಬರೆದ ಪತ್ರದ ಪ್ರಕಾರ, ರಾಜ್ಯ ಗೃಹ ಸಚಿವರು ಅಮಾನತುಗೊಂಡ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್(ಎಪಿಐ) ಸಚಿನ್ ವಾಜೆ ಅವರಿಗೆ ಪ್ರತಿ ತಿಂಗಳು ಮಹಾನಗರದ 1,742 ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ 100 ಕೋಟಿ ರೂ. ಸಂಗ್ರಹಿಸುವಂತೆ ಸೂಚಿಸಿದ್ದಾರೆ ಎಂದರು.

ಭ್ರಷ್ಟಾಚಾರದಲ್ಲಿ ತೊಡಗಿರುವ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ(ಎಂವಿಎ) ಸರ್ಕಾರ ಈ ಕೂಡಲೇ ರಾಜೀನಾಮೆ ನೀಡುವಂತೆ ಮತ್ತು ಪೊಲೀಸ್ ಅಧಿಕಾರಿಯ ಆರೋಪದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಬಿಜೆಪಿ ಒತ್ತಾಯಿಸಿದೆ

ಸರ್ಕಾರದಲ್ಲಿರುವವರು ಹಣ ಸಂಗ್ರಹಿಸಲು ಅಧಿಕಾರಿಗಳನ್ನು ಬಳಸುತ್ತಿದ್ದಾರೆ ಎಂದು ಪತ್ರ ಹೇಳುತ್ತಿದೆ. ಆದರೆ ಮುಖ್ಯಮಂತ್ರಿ ಈ ವಿಷಯದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕೊಟಕ್ ಅವರು ಹೇಳಿದರು.

"ಇದು ಗಂಭೀರ ವಿಷಯ. ಗೃಹ ಸಚಿವರು ರಾಜೀನಾಮೆ ನೀಡಬೇಕು, ಮಹಾರಾಷ್ಟ್ರ ಸರ್ಕಾರ ರಾಜೀನಾಮೆ ನೀಡಬೇಕು ಮತ್ತು ಇಡೀ ವಿಷಯದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು" ಎಂದು ಕೊಟಕ್ ಆಗ್ರಹಿಸಿದರು.

ಅಮಾನತ್ತುಗೊಂಡಿದ್ದ ವಾಜೆಯನ್ನು ಮತ್ತೆ ಹೇಗೆ ಮರು ನೇಮಿಸಲಾಯಿತು? ಎಂದು ಬಿಜೆಪಿ ಸಂಸದ ರಾಕೇಶ್‌ ಸಿಂಗ್‌ ಪ್ರಶ್ನಿಸಿದರು. ನಿನ್ನೆಯವರೆಗೂ ವಿಷಯ ಅತ್ಯಂತ ಗಂಭೀರ ಎಂದು ಹೇಳುತ್ತಿದ್ದ ಎನ್‌ ಸಿಪಿ ನಾಯಕರು ಇಂದು ಬೆಳಗ್ಗೆಯಿಂದ ತಮ್ಮ ಮಾತು ಬದಲಿಸಿದ್ದಾರೆ, ಗೃಹ ಸಚಿವ ಅನಿಲ್‌ ದೇಶಮುಖ್‌ ಎಲ್ಲಿ ತಮ್ಮ ಬಂಡವಾಳ ಬಯಲುಗೊಳಿಸುತ್ತಾರೋ ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ರಾಕೇಶ್‌ ಆರೋಪಿಸಿದರು. ಯಾರಿಗೆ ಎಷ್ಟು ಹಣ ತಲುಪಿದೆ ಎಂಬುದನ್ನು ದೇಶದ ಜನ ತಿಳಿಯ ಬಯಸುತ್ತಾರೆ ಎಂದರು.

ಗೃಹ ಸಚಿವರ ಬೆದರಿಕೆಯಿಂದಾಗಿ ಎನ್‌ಸಿಪಿ ನಾಯಕರು ಈಗ ಹಿಂದೆ ಸರಿದಿದ್ದಾರೆ ಎಂದು ಬಿಜೆಪಿ ಸಂಸದ ಕಪಿಲ್ ಪಾಟೀಲ್ ಆರೋಪಿಸಿದರು. ಮಹಾ ವಿಕಾಸ್‌ ಅಘಾಡಿ ಮೈತ್ರಿ ಕೂಟ ಸರ್ಕಾರವನ್ನು ಪತನಗೊಳಿಸಲು ಈ ಆರೋಪಗಳನ್ನು ಮಾಡಲಾಗಿದೆ ಎಂದು ಶಿವಸೇನೆ ಸಂಸದ ವಿನಾಯಕ್ ರಾವತ್‌ ಆರೋಪಿಸಿದರು.

ಒಬ್ಬ ಇನ್ಸ್‌ಪೆಕ್ಟರ್‌ಗೆ ಬೆಂಬಲವಾಗಿ ಮುಖ್ಯಮಂತ್ರಿ ಮಾಧ್ಯಮ ಸಮಾವೇಶ ನಡೆಸುತ್ತಿರುವುದು ದೇಶದಲ್ಲಿ ಇದೇ ಮೊದಲು , ನೂರು ಕೋಟಿ ಗುರಿ ನೀಡಿದ ಆ ಇನ್ಸ್‌ಪೆಕ್ಟರ್‌ಗೆ ಮುಖ್ಯಮಂತ್ರಿ ಬೆಂಬಲ ನೀಡಿರುವುದು ದೊಡ್ಡ ದುರಂತ ಎಂದು ಬಿಜೆಪಿ ಸಂಸದ ರಾಕೇಶ್ ಸಿಂಗ್ ವಿಷಾಧ ವ್ಯಕ್ತಪಡಿಸಿದರು.

16 ವರ್ಷದ ಹಿಂದೆ ಸೇವೆಯಿಂದ ಅಮಾನತುಗೊಂಡಿದ್ದ ವ್ಯಕ್ತಿಯನ್ನು ಯಾವ ಆಧಾರದ ಮೇಲೆ ಮರು ನೇಮಕಗೊಳಿಸಲಾಯಿತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸ್ವತಃ ಉದ್ಧವ್‌ ಠಾಕ್ರೆ ಆ ಅಧಿಕಾರಿಯನ್ನು ಮರು ನೇಮೀಸಬೇಕೆಂದು ಕೋರಿದ್ದರು, ಆದರೆ ಮಾಜಿ ಮುಖ್ಯಮಂತ್ರಿ ಫಡ್ನವೀಸ್‌ ಆ ಮನವಿಯನ್ನು ತಿರಸ್ಕರಿಸಿದ್ದರು. ಆದರೆ, ಉದ್ಧವ್‌ ಮುಖ್ಯಮಂತ್ರಿ ಆದ ತಕ್ಷಣವೇ ಆ ಅಧಿಕಾರಿಯನ್ನು ಮರು ನೇಮಿಸಿಕೊಂಡಿದ್ದಾರೆ ಎಂದು ಪಕ್ಷೇತರ ಸದಸ್ಯೆ ನವನೀತ್‌ ರವಿರಾಣಾ ಟೀಕಿಸಿದರು.

ಮುಂಬೈ ನಗರ ಪೊಲೀಸ್‌ ಆಯುಕ್ತ ಹುದ್ದೆಯಿಂದ ವರ್ಗಾಯಿಸಿದ ನಂತರ, ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಎನ್‌ಸಿಪಿ ಹಿರಿಯ ಮುಖಂಡ ದೇಶಮುಖ್, ಮುಂಬೈನ ಬಾರ್ ಮತ್ತು ಹೋಟೆಲ್‌ಗಳಿಂದ ಮಾಸಿಕ 100 ಕೋಟಿ ರೂ. ಸಂಗ್ರಹಿಸುವಂತೆ ಸಚಿನ್ ವಾಜೆ ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಆರೋಪಿಸಿದ್ದರು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp