ಎನ್.ಡಿ.ಎ. ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ವಿರುದ್ಧ ಕಾನೂನು; ಡಿ.ವಿ.ಸದಾನಂದ ಗೌಡ
ಸಿಪಿಐ-ಎಂ ನೇತೃತ್ವದ ಸರ್ಕಾರದ ದುರಾಡಳಿತದಿಂದ ಕೇರಳ ಜನತೆ ರೋಸಿಹೋಗಿದ್ದು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ. ಮುಂಚೂಣಿ ಓಟಗಾರನಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
Published: 22nd March 2021 09:17 PM | Last Updated: 22nd March 2021 09:17 PM | A+A A-

ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ
ತಿರುವನಂತಪುರ: ಸಿಪಿಐ-ಎಂ ನೇತೃತ್ವದ ಸರ್ಕಾರದ ದುರಾಡಳಿತದಿಂದ ಕೇರಳ ಜನತೆ ರೋಸಿಹೋಗಿದ್ದು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ. ಮುಂಚೂಣಿ ಓಟಗಾರನಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಕೇರಳದ ರಾಜಧಾನಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಸಿಪಿಐ-ಎಂ ನೇತೃತ್ವದ ಎಡರಂಗ ಸರ್ಕಾರದ ವಿರುದ್ಧ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವರು - ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಸೇರಿದಂತೆ ರಾಜ್ಯಬಾರದ ಎಲ್ಲ ಮಜಲುಗಳಿಲ್ಲಿಯೂ ಎಡರಂಗ ಸರ್ಕಾರವು ವಿಫಲಗೊಂಡಿದೆ ಎಂದರು.
ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀರಾನೇ ಹದಗೆಟ್ಟಿದೆ. ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗವೇ ಅಧಿಕಾರದಲ್ಲಿರಲಿ ಅಥವಾ ಎಡರಂಗದ ಸರ್ಕಾರವೇ ಆಗಿರಲಿ ಕೋಮುಶಕ್ತಗಳಿಗೆ ಪುಷ್ಟಿ ನೀಡುವ ಕೆಲಸವಾಗುತ್ತಿದೆ. ಕೇರಳವು ಭಯೋತ್ಪಾದನಾ ಚಟುವಟಿಕೆಯ ಕಾರಸ್ಥಾನವಾಗುತ್ತಿದೆ. ರಾಜಕೀಯ ಕೊಲೆಗಳು ಎಗ್ಗಿಲ್ಲದೆ ನಡೆದಿವೆ. ಕಳೆದೊಂದು ವರ್ಷದಲ್ಲಿ ಕನಿಷ್ಠವೆಂದರೂ 22 ಜನ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಸದಾನಂದ ಗೌಡ ವಿವರಿಸಿದರು.
ಕೇರಳದಲ್ಲಿ ಲವ್-ಜಿಹಾದ್ ಕೂಡಾ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್ ಸಮುದಾಯ ಕೂಡಾ ಈ ಪಿಡುಗಿಗೆ ತುತ್ತಾಗಿದೆ. ನಾವು ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುತ್ತೇವೆ ಎಂದು ಅವರು ಹೇಳಿದರು.
ನಾಸ್ತಿಕ ಕಮ್ಯುನಿಷ್ಟರು ರಾಜ್ಯದ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಗಲ್ಲಿ ತುಂಬಿಕೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿಯ ಹಿರಿಯ ನಾಯಕ ಸದಾನಂದ ಗೌಡ - ಪಕ್ಷವು ಅಧಿಕಾರಕ್ಕೆ ಬಂದರೆ ಈ ಎಲ್ಲ ಮಂಡಳಿಗಳನ್ನು ವಿಸರ್ಜಿಸಿ ಆಯಾ ದೇವಸ್ಥಾನಗಳ ಶ್ರದ್ಧಾಳುಗಳನ್ನು ಒಳಗೊಂಡ ನೂತನ ಆಡಳಿತ ಮಂಡಳಿಗಳನ್ನು ರಚಿಸಲಾಗುವುದು. ಅದು ಶಬರಿಮಲೆ ಸ್ವಾಮಿ ಅಯ್ಯಪ್ಪ ಪರಂಪರೆಯೇ ಇರಬಹುದು ಅಥವಾ ಇನ್ಯಾವುದೇ ಹಿಂದು ದೇವಸ್ಥಾನದ ರೀತಿ-ರಿವಾಜುಗಳೇ ಇರಬಹುದು. ಎಡರಂಗ ಸರ್ಕಾರವು ಹಿಂದುಗಳ ಆಸ್ಥೆಗೆ ಎಸಗುತ್ತಿರುವ ಅಪಚಾರ ಕೇರಳದ ಜನರಿಗೆ ಅರ್ಥವಾಗುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎನ್.ಡಿ.ಎ. ಶೇಕಡಾ 17ರಷ್ಟು ಮತ ಗಳಿಸಿದೆ. ಪಂಡಲಮ್ ನಗರಸಭೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ-ಎಂದರು.
ಎಡರಂಗ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಚಿನ್ನ ಕಳ್ಳಸಾಗಣೆ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಚೇರಿಯ ಹೆಸರು ತಳುಕುಹಾಕಿಕೊಂಡಿದೆ. ಸರ್ಕಾರಿ ನೇಮಕ ಪ್ರಕ್ರಿಯೆಯಲ್ಲಿಯೂ ತೀವ್ರ ಭ್ರಷ್ಚಾಚಾರ ನಡೆದಿದೆ. ಸಚಿವರು, ಶಾಸಕರು ಮತ್ತು ಎಡಪಂಥೀಯ ನಾಯಕರ ಕೃಪಾಶೀರ್ವಾದ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯಗಳಲ್ಲಿ ಯಾವುದೇ ಪಕ್ಷ ಅಧಿಕಾದಲ್ಲಿ ಇರಲಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳನ್ನು ಸಮನಾಂತರವಾಗಿ ನೋಡುತ್ತಿದೆ. ದೇಶದ ಎಲ್ಲ ರಾಜ್ಯಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಕೂಡಾ ಅಭಿವೃದ್ಧಿಯಾಗುತ್ತದೆ ಎಂಬುದು ನಮ್ಮ ಧೋರಣೆ. ಭಾರತವು ಒಂದು ಒಕ್ಕೂಟ ವ್ಯವಸ್ಥೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿಯೇ ಹೆಜ್ಜೆ ಹಾಕಬೇಕಾಗುತ್ತದೆ. ಆದರೆ ಪಿಣರಾಯಿ ಸರಕಾರದ ಮನಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಪಿಣರಾಯಿ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ನೀಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಹಾಗೂ ರೇಲ್ವೆ ಯೋಜನೆಗಳಿಗೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ಧಾರಿ. ಆದರೆ ಕೇರಳದಲ್ಲಿ ಅಗತ್ಯ ಭೂಮಿ ಲಭ್ಯವಾಗದೆ ಕೆಲವು ಮಹತ್ವದ ಹೆದ್ದಾರಿ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಕೇಂದ್ರ ಸಚಿವರು ಎಡರಂಗ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಭ್ರಷ್ಟಾಚಾರ-ರಹಿತ ಪಾರದರ್ಶಕ ಆಡಳಿತ, ಸುಶಾಸನ ಮತ್ತು ಅಭಿವೃದ್ಧಿಯೇ ಮೋದಿ ಸರ್ಕಾರದ ಮಂತ್ರವಾಗಿದೆ. ಕೇರಳವು ವಿದ್ಯಾವಂತರ ನಾಡಾಗಿದೆ. ಅದು ಇನ್ನಷ್ಟು ಅಭಿವೃದ್ಧಿಗೆ ಅರ್ಹವಾಗಿದೆ. ಆದರೆ ದಶಕಗಳಿಂದ ಕಾಂಗ್ರೆಸ್ ಮತ್ತು ಎಡಪಂಥೀಯರ ದುರಾಡಳಿತದಿಂದ ನಲುಗಿದೆ. ರಾಜ್ಯಕ್ಕೆ ಬದಲಾವಣೆ ಬೇಕು. ನಿಜವಾದ ಪರಿವರ್ತನೆ ಬೇಕು. ಹಾಗಾಗಿ ಎನ್.ಡಿ.ಎ.ಗೆ ಒಂದು ಅವಕಾಶ ನೀಡುವಂತೆ ಕೇರಳದ ಜನತೆಯನ್ನು ಕೋರುತ್ತಿದ್ದೇನೆ ಎಂದು ಸದಾನಂದ ಗೌಡ ಹೇಳಿದರು. ಕೇರಳ ಬಿಜೆಪಿ ಉಸ್ತುವಾರಿ ಸಿ ಪಿ ರಾಧಾಕೃಷ್ಣನ್, ರಾಜ್ಯ ಎನ್.ಡಿ.ಎ. ಮುಖಂಡರು ಉಪಸ್ಥಿತರಿದ್ದರು.