
ಸಂಗ್ರಹ ಚಿತ್ರ
ಮುಂಬೈ: 9 ಮಂದಿಯನ್ನು ಬಲಿಪಡೆದುಕೊಂಡಿದ್ದ ಮುಂಬೈನ ಬಂದಪ್ ಮಾಲ್ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.
ವಸತಿ ಅಭಿವೃದ್ಧಿ ಮತ್ತು ಮೂಲಸೌಕರ್ಯ ಮಂಡಳಿ(ಹೆಚ್ಡಿಐಎಲ್) ಪ್ರವರ್ತಕ ರಾಕೇಶ್ ವಡವನ್, ಇವರ ಪುತ್ರ ಹಾಗೂ ಮಾಲ್'ನ ನಿರ್ದೇಶನಾಗಿರುವ ಸಾರಂಗ್ ವಡವನ್, ನಿಖಿತಾ ಅಮಿತ್ ಸಿಂಗ್ ತ್ರೆಹಾನ್, ದೀಪಕ್ ಶಿರ್ಕೆ, ಅಮಿತ್ ಸಿಂಗ್ ತ್ರೆಹಾನ್, ಸ್ವೀಟಿ ಜೈನ್ ಎಂಬುವವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಈ 6 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 304 (ನರಹತ್ಯೆ), 34 (ಸಾಮಾನ್ಯ ಉದ್ದೇಶ)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.
ತನಿಖೆ ವೇಳೆ ಮಾಲ್ ನಲ್ಲಿ ಹಲವು ದೋಷಗಳಿರುವುದು ಕಂಡು ಬಂದಿದೆ. ಭದ್ರತೆ ಹಾಗೂ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲದೇ ಇರುವುದು ತಿಳಿದುಬಂದಿದೆ. ಮಾಲ್ ನಲ್ಲಿ ಒಟ್ಟು 1,108 ಮಳಿಗೆಗಳಿದ್ದು, ಇದರಲ್ಲಿ ಶೇ.40ರಷ್ಟು ಅಂಗಡಿಗಳು ಬಂದ್ ಆಗಿವೆ. ಕಳೆದ ಜನವರಿ ತಿಂಗಳಿನಲ್ಲಿ ಸನ್ ರೈಸ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಕೇಂದ್ರವಾಗಿ ಮಾರ್ಪಡಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರುವಾರ ಮಧ್ಯರಾತ್ರಿ ಮಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನಂತರ ಮೇಲಿನ ಮಹಡಿಯಲ್ಲಿದ್ದ ಆಸ್ಪತ್ರೆಗೂ ಹೊತ್ತಿಕೊಂಡಿದೆ. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಉಸಿರಾಡಲು ಸಾಧ್ಯವಾಗದೆ 9 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದು, ಮತ್ತಿಬ್ಬರು ವ್ಯಕ್ತಿಗಳು ಅಗ್ನಿ ಅವಘಡ ಸಂಭವಿಸುವುದಕ್ಕೂ ಮುನ್ನವೇ ಸೋಂಕಿನಿಂದ ಸಾವನ್ನಪ್ಪಿದ್ದರು ಎಂದು ಬಿಎಂಸಿ ಮಾಹಿತಿ ನೀಡಿದೆ.
ಆಸ್ಪತ್ರೆಯಲ್ಲಿ ಒಟ್ಟು 107 ಹಾಸಿಗೆಗಳಿದ್ದು, 78 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಅಗ್ನಿ ಅವಘಡ ಸಂಭವಿಸುತ್ತಿದ್ದಂತೆಯೇ 67 ಮಂದಿ ರೋಗಿಗಳನ್ನು ಇತರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು ಎಂದು ತಿಳಿಸಿದೆ.
ಮುಂಬೈನ ಬಂದಪ್ ಪ್ರದೇಶದಲ್ಲಿ 4 ಅಂತಸ್ತಿನ ಡ್ರೀಮ್ ಎಂಬ ಮಾಲ್ ಇದೆ. ಇದರ 4ನೇ ಮಹಡಿಯಲ್ಲಿ ಸನ್ ರೈಸ್ ಎಂಬ ಆಸ್ಪತ್ರೆ ಇದೆ. ಅಲ್ಲಿ ಗುರುವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ 22 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದರು.
ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು, ಕೊರೋನಾ ಕೇಂದ್ರವಾಗಿ ಪರಿವರ್ತಿಸಲು ಆಸ್ಪತ್ರೆಗೆ ತಾತ್ಕಾಲಿಕ ಅನುಮತಿ ನೀಡಲಾಗಿತ್ತು. ಘಟನೆಯಲ್ಲಿ ಸಾವಿಗೀಡಾದ ಕುಟುಂಬಸ್ಥರ ಕ್ಷಮೆ ಕೋರುತ್ತೇನೆ. ಸಾವಿಗೀಡಾದವರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಲಾಗುತ್ತದೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು.