ಕೃಷಿ ಕ್ಷೇತ್ರದಲ್ಲಿ ಆಧುನೀಕರಣ ಇಂದು ಅತ್ಯಗತ್ಯವಾಗಿದೆ: ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ
ಕೃಷಿ ವಲಯದಲ್ಲಿ ಆಧುನೀಕರಣ ಇಂದಿನ ಅನಿವಾರ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, ಕೃಷಿ ವಲಯದಲ್ಲಿ ಆಧುನಿಕ ಪದ್ಧತಿಗಳ ಅಳವಡಿಕೆ ಇಂದಿನ ಅಗತ್ಯತೆಯಾಗಿದ್ದು ಜೀವನದ ಪ್ರತಿ ಗಳಿಗೆಯಲ್ಲಿ ಹೊಸತನ, ಆಧುನೀಕರಣ ಮುಖ್ಯವಾಗಿದೆ ಎಂದರು.
Published: 28th March 2021 01:21 PM | Last Updated: 28th March 2021 01:44 PM | A+A A-

ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಕೃಷಿ ವಲಯದಲ್ಲಿ ಆಧುನೀಕರಣ ಇಂದಿನ ಅನಿವಾರ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, ಕೃಷಿ ವಲಯದಲ್ಲಿ ಆಧುನಿಕ ಪದ್ಧತಿಗಳ ಅಳವಡಿಕೆ ಇಂದಿನ ಅಗತ್ಯತೆಯಾಗಿದ್ದು ಜೀವನದ ಪ್ರತಿ ಗಳಿಗೆಯಲ್ಲಿ ಹೊಸತನ, ಆಧುನೀಕರಣ ಮುಖ್ಯವಾಗಿದೆ ಎಂದರು.
ಭಾರತದ ಕೃಷಿ ವಲಯದಲ್ಲಿ ಆಧುನೀಕರಣ ಮುಖ್ಯವಾಗಿದೆ. ಭಾರತದಲ್ಲಿ ಕೃಷಿ ಪದ್ಧತಿಯಲ್ಲಿ ಆಧುನೀಕರಣ ತರುವಲ್ಲಿ ವಿಳಂಬವಾಗಿದೆ, ಈಗಾಗಲೇ ನಾವು ಸಾಕಷ್ಟು ಸಮಯ ನಿಷ್ಟ್ರಯೋಜಕವಾಗಿ ಕಳೆದಿದ್ದೇವೆ. ಕೃಷಿ ವಲಯದಲ್ಲಿ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸಲು, ರೈತರ ಆದಾಯವನ್ನು ಹೆಚ್ಚಿಸಲು, ಕೃಷಿಯಲ್ಲಿ ಹೊಸ ಬದಲಿ ಕ್ರಮಗಳನ್ನು ಅಳವಡಿಸಲು,ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಹೊಸತನ, ಸೃಜನಶೀಲತೆ ತರಲು ಆಧುನೀಕರಣ ಮುಖ್ಯವಾಗುತ್ತದೆ ಎಂದು ಪ್ರಧಾನಿ ಮನ್ ಕಿ ಬಾತ್ ನಲ್ಲಿ ವಿವರಿಸಿದರು.
ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳೊಂದಿಗೆ ಉದ್ಯೋಗಾವಕಾಶಗಳ ಸೃಷ್ಟಿ, ರೈತರ ಆದಾಯ ಹೆಚ್ಚಿಸುವುದು, ಹಾಗೆಯೇ ಜೇನು ಸಾಕಾಣಿಕೆಯ ಮಹತ್ವ, ಗುಬ್ಬಚ್ಚಿಗಳ ಸಂತತಿ ಉಳಿಸುವ ನಿಟ್ಟಿನಲ್ಲಿ ಮಾಡಬೇಕಾದ ಪ್ರಯತ್ನವಲ್ಲದೆ, ಇನ್ನೂ ಅನೇಕ ಸ್ವಚ್ಛತಾ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಭಾಗಗಳಾದ ಗಾಜಿಪುರ್, ಸಿಂಘು ಮತ್ತು ಟಿಕ್ರಿಯಲ್ಲಿ ಕಳೆದ ನವೆಂಬರ್ ನಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೃಷಿ ಪದ್ಧತಿಯಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯಿಂದ ಹೂಡಿಕೆ, ಆಧುನೀಕರಣ ತರುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ, ರೈತರು ತಮ್ಮ ಉತ್ಪನ್ನಗಳನ್ನು ದೇಶಾದ್ಯಂತ ಎಲ್ಲಿಯಾದರೂ ಉತ್ತಮ ಬೆಲೆಗೆ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಸರ್ಕಾರ ಕೃಷಿ ಕಾಯ್ದೆಯನ್ನು ಸಮರ್ಥಿಸುತ್ತಾ ಬಂದಿದೆ.