ಅಂಬಾನಿ ಮನೆ ಸಮೀಪ ಕಾರಿನಲ್ಲಿ ಪತ್ತೆಯಾದ ಸ್ಫೋಟಕಗಳನ್ನು ಸಂಗ್ರಹಿಸಿದ್ದು ಸಚಿನ್ ವಾಜೆ: ಎನ್ಐಎ
ಕಳೆದ ತಿಂಗಳು ಮುಂಬೈನಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಎಸ್ ಯುವಿ ಕಾರಿನಲ್ಲಿ ಪತ್ತೆಯಾದ ಜೆಲೆಟಿನ್ ಕಡ್ಡಿಗಳನ್ನು ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರೇ ಸಂಗ್ರಹಿಸಿದ್ದರು...
Published: 31st March 2021 03:01 PM | Last Updated: 31st March 2021 03:01 PM | A+A A-

ಸಚಿನ್ ವಾಜೆ
ಮುಂಬೈ: ಕಳೆದ ತಿಂಗಳು ಮುಂಬೈನಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಎಸ್ ಯುವಿ ಕಾರಿನಲ್ಲಿ ಪತ್ತೆಯಾದ ಜೆಲೆಟಿನ್ ಕಡ್ಡಿಗಳನ್ನು ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರೇ ಸಂಗ್ರಹಿಸಿದ್ದರು ಎಂದು ಎನ್ಐಎ ಮೂಲಗಳು ಬುಧವಾರ ತಿಳಿಸಿವೆ.
ಆದಾಗ್ಯೂ, ಸ್ಫೋಟಕಗಳ ಮೂಲದ ಬಗ್ಗೆ ವಿವರ ನೀಡಲು ಅವರು ನಿರಾಕರಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ), ವಾಜೆ ಮತ್ತು ಅವರ ಚಾಲಕ ಇಬ್ಬರೂ ಸೇರಿ ಎಸ್ಯುವಿ ಕಾರನ್ನು ಅಂಬಾನಿಯ ಮನೆಯ ಬಳಿ ನಿಲ್ಲಿಸಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
"ಕಾರಿನಲ್ಲಿ ಇರಿಸಲಾಗಿರುವ ಜೆಲೆಟಿನ್ ಕಡ್ಡಿಗಳನ್ನು ಅಮಾನತುಗೊಂಡ ಪೊಲೀಸ್ ಅಧಿಕಾರಿಯೇ ಸಂಗ್ರಹಿಸಿದ್ದರು" ಎಂದು ಮೂಲವೊಂದು ತಿಳಿಸಿದೆ.
ಎನ್ಐಎ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಕಾರು ನಿಂತಿದ್ದ ಸ್ಥಳದಲ್ಲಿಯೇ ವಾಜೆ ಇರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದ ತನಿಖೆಯ ಭಾಗವಾಗಿ, ಎನ್ಐಎ ತಂಡ, ಮುಂಬೈ ಪೊಲೀಸ್ ಆಯುಕ್ತರ ಕಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲು ಹೊರಟಿದೆ, ಇದು ವಾಜೆ ಅವರ ಚಲನವಲನಗಳು ಮತ್ತು ಇತರ ಅಂಶಗಳನ್ನು ಪತ್ತೆಹಚ್ಚುತ್ತದೆ ಎಂದು ಅವರು ಹೇಳಿದ್ದಾರೆ.