ಗುಜರಾತ್ ಆಸ್ಪತ್ರೆ ಬೆಂಕಿ ದುರಂತ: ಸಿಎಂ ವಿಜಯ್ ರೂಪಾನಿ ಸಂತಾಪ, ಮೃತರ ಕುಟುಂಬಕ್ಕೆ ರೂ. 4 ಲಕ್ಷ ಪರಿಹಾರ ಘೋಷಣೆ

ಗುಜರಾತ್ ರಾಜ್ಯದ ಭರೂಚ್ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಗುಜರಾತ್ ರಾಜ್ಯ ಮುಖ್ಯಮಂತ್ರಿ ವಿಜಯ್ ರುಪಾನಿಯವರು, ಮೃತರ ಕುಟುಂಬಕ್ಕೆ ರೂ.4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 
ಭರೂಚ್ ಆಸ್ಪತ್ರೆ
ಭರೂಚ್ ಆಸ್ಪತ್ರೆ

ಭರೂಚ್: ಗುಜರಾತ್ ರಾಜ್ಯದ ಭರೂಚ್ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಗುಜರಾತ್ ರಾಜ್ಯ ಮುಖ್ಯಮಂತ್ರಿ ವಿಜಯ್ ರುಪಾನಿಯವರು, ಮೃತರ ಕುಟುಂಬಕ್ಕೆ ರೂ.4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭರೂಚ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ರೋಗಿಗಳು, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ಅಲ್ಲದೆ ರಾಜ್ಯ ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ ರೂ.4 ಲಕ್ಷ ಪರಿಹಾರ ನೀಡಲಾಗುತ್ತೆದ ಎಂದು ಹೇಳಿದ್ದಾರೆ. 

ಅಲ್ಲದೆ, ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿರುೋವ ರೂಪಾನಿಯವರು, ಇಬ್ಬರು ಐಎಎಸ್ ಹಿರಿಯ ಆಧಿಕಾರಿಗಳು, ಕಾರ್ಮಿಕ ಮತ್ತು ಉದ್ಯೋಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಫುಲ್ ಮಿತ್ರ ಮತ್ತು ಪುರಸಭೆ ಆಯುಕ್ತ ರಾಜ್‌ಕುಮಾರ್ ಬೆನಿವಾಲ್ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. 

4 ಅಂತಸ್ತಿನ ಕೋವಿಡ್ ಆಸ್ಪತ್ರೆ ಭರೂಚ್-ಜಂಬುಸಾರ್ ಹೈವೇ ಬಳಿಯಲ್ಲಿದ್ದು, ಆಸ್ಪತ್ರೆಯ ನೆಲಮಹಡಿಯಲ್ಲಿರುವ ಕೋವಿಡ್ ವಾರ್ಡ್ ಒಂದರಲ್ಲಿ ಇಂದು ಮುಂಜಾನೆ 1 ಗಂಟೆ ಸುಮಾರಿಗೆ ಅಗ್ನಿ ಆಕಸ್ಮಿಕ ಸಂಭವಿಸಿದೆ. ಘಟನೆಯಲ್ಲಿ 12 ಕೋವಿಡ್ ರೋಗಿಗಳು ಮತ್ತು ಇಬ್ಬರು ಸಿಬ್ಬಂದಿ ಸೇರಿ ಒಟ್ಟು 16 ಜನ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 

ಸುಮಾರು ಒಂದು ಗಂಟೆಯ ಸತತ ಪ್ರಯತ್ನದಿಂದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದು 50 ರೋಗಿಗಳನ್ನು ಕಾಪಾಡಲಾಗಿದೆ. 

ರೋಗಿಗಳನ್ನು ಸಮೀಪದ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಬೆಂಕಿ ಅನಾಹುತಕ್ಕೆ ಮೂಲ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ ಎಂದು ಎಸ್​ಪಿ ರಾಜೇಂದ್ರಸಿನ್ಹ್ ಚೂಡಾಸಮ ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದ ಈ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿತ್ತು. ಐಸಿಯುನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಉಂಟಾಗಿದೆ ಎಂದು ಶಂಕಿಸಲಾಗುತ್ತಿದೆ.

ಘಟನೆ ಸಂಭವಿಸುತ್ತಿದ್ದಂತೆಯೇ ಸುಮಾರು 40 ಆಂಬ್ಯುಲೆನ್ಸ್​​ಗಳು ಕೂಡಲೇ ಸ್ಥಳಕ್ಕೆ ತೆರಳಿದ್ದು, ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲು ನೆರವಾದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com