ಪ.ಬಂಗಾಳ, ತ.ನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಕಳೆದ 2 ತಿಂಗಳಿಂದ ನಡೆಯುತ್ತಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆ ಕಸರತ್ತು ಭಾನುವಾರ ಮುಕ್ತಾಯಗೊಳ್ಳಲಿದ್ದು, ಎಲ್ಲಾ ಐದು ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿದೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಳೆದ 2 ತಿಂಗಳಿಂದ ನಡೆಯುತ್ತಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆ ಕಸರತ್ತು ಭಾನುವಾರ ಮುಕ್ತಾಯಗೊಳ್ಳಲಿದ್ದು, ಎಲ್ಲಾ ಐದು ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿದೆ.  

ಈ ಚುನಾವಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪ್ರತಿಪಕ್ಷಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಮತ ಎಣಿಕೆ ತೀವ್ರ ಕುತೂಹಲ ಕೆರಳಿಸಿದೆ. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟದ ಬಳಿಕ ಎಲ್ಲಾ ರೀತಿಯ ಸಂಭ್ರಮಾಚರಣೆ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿದೆ. 

ಅಲ್ಲದೆ, ಮತ ಎಣಿಕೆ ಕೇಂದ್ರ ಪ್ರವೇಶಿಸುವ ಅಭ್ಯರ್ಥಿಗಳು ಮತ್ತು ಏಜೆಂಟ್ ಗಳಿಗೆ ಕೊರೋನಾ ನೆಗೆಟಿವ್ ವರದಿ ಅಥವಾ ಕೊರೋನಾ 2 ಡೋಸ್ ಲಸಿಕೆ ಪಡೆದ ದಾಖಲೆ ಹಾಜರಿ ಕಡ್ಡಾಯ ಮಾಡಲಾಗಿದೆ. 

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಶತಾಯಗತಾಯ ಯತ್ನಿಸುತ್ತಿದೆ. ಎಡರಂಗ-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹಲವು ಚುನಾವಣೋತ್ತರ ಸಮೀಕ್ಷೆಗಳು ಮಮತಾ ಗೆಲ್ಲುತ್ತಾರೆ ಎಂದು ಹೇಳಿವೆ. ಕೆಲವು ಬಿಜೆಪಿ ಪರ ಒಲವು ವ್ಯಕ್ತಪಡಿಸಿವೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಹೋರಾಟಕ್ಕಿಂತಲೂ ಹೆಚ್ಚಾಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಹೋರಾಟ ನಡೆಯುತ್ತಿರುವಂತೆ ಬಿಂಬಿಸಲಾಯಿತು. ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ತಮ್ಮ ಜನಪ್ರಿಯತೆ, ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಗೆಲ್ಲುವರಾರು ಎನ್ನುವುದು ಇಂದು ಬಹಿರಂಗವಾಗಲಿದೆ. 

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೇ ಗೆಲ್ಲಲಿ, ಟಿಎಂಸಿಯೇ ಗೆಲ್ಲಲಿ ಹೊಸ ಇತಿಹಾಸ ನಿರ್ಮಾಣವಾಗುವುದಂತೂ ಖಚಿತ. ಟಿಎಂಸಿ ಪಕ್ಷ ಗೆದ್ದರೆ, ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಂತೆ ಆಗುತ್ತೆ. ಬಿಜೆಪಿ ಗೆದ್ದರೆ, ಕಳೆದ ಚುನಾವಣೆಯಲ್ಲಿ ಕೇವಲ ಮೂರೇ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದ ಪಕ್ಷ ಈಗ ಬಹುಮತ ಪಡೆದು ಅಧಿಕಾರಕ್ಕೆ ಬಂದಂತೆ ಆಗುತ್ತದೆ. 

ಇನ್ನು ಕೇರಳದಲ್ಲಿ 140 ಕ್ಷೇತ್ರಗಳಿಗೆ 597 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಸಮೀಕ್ಷೆಗಳಲ್ಲಿ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಮತ್ತೆ ಜಯಗಳಿಸಲಿದೆ, ಕಾಂಗ್ರೆಸ್‌ ಸೋಲಲಿದೆ ಎಂದು ಹೇಳಲಾಗುತ್ತಿದೆ, ಇಲ್ಲಿ ಅಬ್ಬರದ ಪ್ರಚಾರ ಮಾಡಿದ್ದ ಬಿಜೆಪಿ ನಿರೀಕ್ಷಿತ ಸ್ಥಾನ ಪಡೆಯುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆಗಳು ನುಡಿದಿವೆ.

ಪುದುಚೇರಿಯಲ್ಲಿ ಎನ್‌ಆರ್‌ ಕಾಂಗ್ರೆಸ್‌-ಬಿಜೆಪಿ ಒಟ್ಟಾಗಿ ಸ್ಪರ್ಧಿಸಿದ್ದು, ಡಿಎಂಕೆ-ಕಾಂಗ್ರೆಸ್ಸನ್ನು ಮಣಿಸಿ ಜಯಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ. ಇದು ಸಾಕಾರವಾದರೆ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿ ಬಿಜೆಪಿ ಗೆದ್ದಾಂತಾಗುತ್ತದೆ. ಇಲ್ಲಿ 30 ಸ್ಥಾನಗಳಿಗೆ ಚುನಾವಣೆ ನಡೆದಿದೆ.

ತಮಿಳುನಾಡಿನ 234 ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಾಗೂ ಕನ್ಯಾಕುಮಾರಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಸಮೀಕ್ಷೆಗಳ ಪ್ರಕಾರ ಇಲ್ಲಿ ಡಿಎಂಕೆ ಗೆಲ್ಲಲಿದ್ದು, ಅಣ್ಣಾಡಿಎಂಕೆ-ಬಿಜೆಪಿ ಕೂಟ ಭಾರೀ ಸೋಲು ಅನುಭವಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದು. ಕಾಂಗ್ರೆಸ್‌ ಸೋಲಬಹುದು ಎಂದು ಸಮೀಕ್ಷೆಗಳು ನುಡಿದಿವೆ. 126 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com