ಬಂಗಾಳದಲ್ಲಿ ಹಿಂಸಾಚಾರ: ಟಿಎಂಸಿ ಪಂಚಾಯತ್ ಸದಸ್ಯನ ಕೊಲೆ, ನಂದಿಗ್ರಾಮದ ಚುನಾವಣಾ ಅಧಿಕಾರಿಗೆ ಭದ್ರತೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದಿದ್ದು, ಪುರ್ಬ ಬರ್ಧಮಾನ್ ಜಿಲ್ಲೆಯಲ್ಲಿ 54 ವರ್ಷದ ಟಿಎಂಸಿ ಕಾರ್ಮಿಕನನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದಿದ್ದು, ಪುರ್ಬ ಬರ್ಧಮಾನ್ ಜಿಲ್ಲೆಯಲ್ಲಿ 54 ವರ್ಷದ ಟಿಎಂಸಿ ಕಾರ್ಮಿಕನನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಕೇತುಗ್ರಾಮದ ಅಗರ್ಧಂಗ ಪ್ರದೇಶದ ಟಿಎಂಸಿ ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಘೋಷ್(54) ಅವರನ್ನು ಸೋಮವಾರ ರಾತ್ರಿ ಮನೆಗೆ ಮರಳುತ್ತಿದ್ದಾಗ ಬಿಜೆಪಿ ಸದಸ್ಯರು ಇರಿದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಿಜೆಪಿ ಟಿಎಂಸಿ ಸದಸ್ಯನ ಹತ್ಯೆ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ ಮತ್ತು ಈ ಘಟನೆಗೂ ತಮ್ಮ ಪಕ್ಷದ ಕಾರ್ಯಕರ್ತರಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದೆ.

ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಭಾರಿ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಇತರ ಭಾಗಗಳಲ್ಲೂ ಹಿಂಸಾಚಾರ ಘಟನೆಗಳು ವರದಿಯಾಗಿವೆ. 

ಕೂಚ್‌ಬೆಹರ್ ಜಿಲ್ಲೆಯಲ್ಲಿ ದಿನ್ಹಾಟಾದ ಬಿಜೆಪಿ ಕಾರ್ಯಕರ್ತೆ ಭಾರತಿ ನಂದಿಯವರ ಮನೆಗೆ ಟಿಎಂಸಿ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ತುಫಂಗಂಜ್ ನಲ್ಲೂ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಅಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಗೆ ಭದ್ರತೆ ಒದಗಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಚುನಾವಣಾ ಆಯೋಗಕ್ಕೆ ತಿಳಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com