ಆಂಧ್ರ ಪ್ರದೇಶದಲ್ಲೂ ಮರುಕಳಿಸಿದ ಆಕ್ಸಿಜನ್ ಕೊರತೆ ದುರಂತ; ಹಿಂದೂಪುರ ಆಸ್ಪತ್ರೆಯಲ್ಲಿ 8 ರೋಗಿಗಳ ಸಾವು

ಕರ್ನಾಟಕದ ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ಕೊರತೆ ದುರಂತ ಹಸಿರಾಗಿರುವಂತೆಯೇ ಇತ್ತ ಆಂಧ್ರ ಪ್ರದೇಶದಲ್ಲೂ ಇಂತಹುದೇ ಘಟನೆ ಮರುಕಳಿಸಿದ್ದು, ಆಕ್ಸಿಜನ್ ಕೊರತೆಯಿಂದಾಗಿ 8 ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ.
ಆಕ್ಸಿಜನ್ ವ್ಯವಸ್ಥೆ
ಆಕ್ಸಿಜನ್ ವ್ಯವಸ್ಥೆ

ಅನಂತಪುರ: ಕರ್ನಾಟಕದ ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ಕೊರತೆ ದುರಂತ ಹಸಿರಾಗಿರುವಂತೆಯೇ ಇತ್ತ ಆಂಧ್ರ ಪ್ರದೇಶದಲ್ಲೂ ಇಂತಹುದೇ ಘಟನೆ ಮರುಕಳಿಸಿದ್ದು, ಆಕ್ಸಿಜನ್ ಕೊರತೆಯಿಂದಾಗಿ 8 ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ.

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ಸರಕಾರಿ ಆಸ್ಪತ್ರೆಯಲ್ಲಿ ಕನಿಷ್ಟ 8 ಕೋವಿಡ್-19 ರೋಗಿಗಳು ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿನ ಆಕ್ಸಿಜನ್ ಬಿಕ್ಕಟ್ಟಿನಿಂದಾಗಿ ಈ ಸಾವು ಸಂಭವಿಸಿದೆ ಎಂದು ರೋಗಿಗಳ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಮೃತರ ಕುಟುಂಬಸ್ಥರು  ದಾಳಿ ಮಾಡಿದ್ದಾರೆ. ಅಲ್ಲದೆ ಕೆಲ ಸೋಂಕಿತರ ಸಂಬಂಧಿಕರು ಆಕ್ಸಿಜನ್ ಸಿಲಿಂಡರ್ ಗಾಗಿ ಪರದಾಡಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಅಲ್ಲದೆ ಮೃತರ ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಮಧ್ಯ  ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಲ್ಲದೆ ಆಸ್ಪತ್ರೆ ಮುಂದೆ ಮುಜಾಗ್ರತಾ ಕ್ರಮವಾಗಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ.

ಆದರೆ ಇತ್ತ ರೋಗಿಗಳ ಸಂಬಂಧಿಕರ ಆರೋಪವನ್ನು ಆಂಧ್ರ ಸರ್ಕಾರ ಅಲ್ಲಗಳೆದಿದೆ. ಎಲ್ಲ ರೋಗಿಗಳನ್ನು ಆಂಧ್ರಪ್ರದೇಶದ ಹಿಂದೂಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗ್ಗಿನ ತನಕ ಸಾವುಗಳು ಸಂಭವಿಸಿರುವ ಕುರಿತು ವರದಿಯಾಗಿದೆ. ಶನಿವಾರ ಅನಂತಪುರ  ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ 16 ರೋಗಿಗಳು ಜೀವ ಕಳೆದುಕೊಂಡಿದ್ದರು. ಇದಕ್ಕೂ ಆಕ್ಸಿಜನ್ ಕೊರತೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಆಕ್ಸಿಜನ್ ಬಿಕ್ಕಟ್ಟನ್ನು ನಿರಾಕರಿಸಿತ್ತು. ಅಲ್ಲದೆ ಹಿಂದೂಪರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ 140 ಆಕ್ಸಿಜನ್ ಸಿಲಿಂಡರ್  ಗಳನ್ನು ಅಳವಡಿಸಲಾಗಿತ್ತು ಎಂದು ಸರ್ಕಾರ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಜಿಹೆಚ್ ಆಸ್ಪತ್ರೆ ಸೂಪರಿಂಡೆಂಟ್ ಡಾ.ದಿವಾಕರ್ ಅವರು, ಆಸ್ಪತ್ರೆಯಲ್ಲಿ 10 ನಿಮಿಷಗಳ ಕಾಲ ಆಕ್ಸಿಜನ್ ಸರಬರಾಜು ಸ್ಥಗಿತವಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇರಲಿಲ್ಲ. ಸಾಕಷ್ಟು ಸಿಲಿಂಡರ್ ಗಳನ್ನು ಸರ್ವಸನ್ನದ್ಧಗೊಳಿಸಲಾಗಿತ್ತು ಎಂದು ಹೇಳಿದ್ದಾರೆ. ಅಂತೆಯೇ  ಮೃತ 8 ಮಂದಿ ರೋಗಿಗಳೂ ಆಸ್ಪತ್ರೆಗೆ ದಾಖಲಾಗುವಾಗಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ದಾಖಲಾಗುವಾಗ ಅವರ ಸ್ಯಾಚುರೇಷನ್ ತೀರಾ ಕಡಿಮೆ ಇತ್ತು. ಅಲ್ಲದೆ ಎಲ್ಲರೂ ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂದು  ಹೇಳಿದ್ದಾರೆ.

ಆಸ್ಪತ್ರೆಯಲ್ಲಿ 200ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಕೆಲ ರೋಗಿಗಳಿಗೆ ಆಕ್ಸಿಜನ್ ಅವಶ್ಯಕತೆ ಇದೆ. ಆಸ್ಪತ್ರೆಯಲ್ಲಿ ಪ್ರತೀ ಎರಡು ದಿನಗಳಿಗೊಮ್ಮೆ ಆಕ್ಸಿಜನ್ ಸಿಲಿಂಡರ್ ಗಳನ್ನು ಭರ್ತಿ ಮಾಡಲಾಗುತ್ತಿದೆ. ಸೋಮವಾರ ಬೆಳಗ್ಗೆ 9ಗಂಟೆಯವರೆಗೂ ಸಾಕಾಗುವಷ್ಟು ಆಕ್ಸಿಜನ್ ಇತ್ತು. ಆದರೆ  ನಿಗದಿಗಿಂತ ಹೆಚ್ಚು ರೋಗಿಗಗಳಿಗೆ ಆಕ್ಸಿಜನ್ ಅವಶ್ಯಕತೆ ಬಿದ್ದರಿಂದ ಅವರಿಗೆ ಹೆಚ್ಚುವರಿ ಆಕ್ಸಿಜನ್ ಅಳವಡಿಸಲಾಗಿತ್ತು. ಹೀಗಾಗಿ ನಿಗದಿತ ಸಮಯಕ್ಕಿಂತ ಮೊದಲೇ ಆಕ್ಸಿಜನ್ ಕೊರತೆಯುಂಟಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com