ತಮಿಳುನಾಡು ಚುನಾವಣೆ: ಕೋಟ್ಯಾಧಿಪತಿ ಅಭ್ಯರ್ಥಿಗಳನ್ನೇ ಮಣಿಸಿ ಗೆದ್ದ ಸಿಪಿಐ ಪಕ್ಷದ ಗುಡಿಸಲು ವಾಸಿ 'ಮಾರಿಮುತ್ತು'!

ರಾಜಕೀಯದಲ್ಲಿ ಹಣ ಇದ್ದರೆ ಮಾತ್ರ ಎಂಬ ಮಾತನ್ನು ತಮಿಳುನಾಡು ಚುನಾವಣೆ ಸುಳ್ಳು ಮಾಡಿದ್ದು, ಎಐಎಡಿಎಂಕೆಯ ಕೋಟ್ಯಾಧಿಪತಿ ಅಭ್ಯರ್ಥಿಯನ್ನು ತಿರುತುರೈಪೂಂಡಿ ಕ್ಷೇತ್ರದ ಗುಡಿಸಲು ವಾಸಿ ಮತ್ತು ಸಿಪಿಐನ ಅಭ್ಯರ್ಥಿ 'ಮಾರಿಮುತ್ತು' ಮಣಿಸಿ ಶಾಸಕರಾಗಿದ್ದಾರೆ.
ಶಾಸಕ ಮಾರಿಮುತ್ತು
ಶಾಸಕ ಮಾರಿಮುತ್ತು

ತಿರುವರೂರು: ರಾಜಕೀಯದಲ್ಲಿ ಹಣ ಇದ್ದರೆ ಮಾತ್ರ ಎಂಬ ಮಾತನ್ನು ತಮಿಳುನಾಡು ಚುನಾವಣೆ ಸುಳ್ಳು ಮಾಡಿದ್ದು, ಎಐಎಡಿಎಂಕೆಯ ಕೋಟ್ಯಾಧಿಪತಿ ಅಭ್ಯರ್ಥಿಯನ್ನು ತಿರುತುರೈಪೂಂಡಿ ಕ್ಷೇತ್ರದ ಗುಡಿಸಲು ವಾಸಿ ಮತ್ತು ಸಿಪಿಐನ ಅಭ್ಯರ್ಥಿ 'ಮಾರಿಮುತ್ತು' ಮಣಿಸಿ ಶಾಸಕರಾಗಿದ್ದಾರೆ.

ಹೌದು.. ಶ್ರೀಮಂತರು ಮತ್ತು ಕೋಟ್ಯಾಧಿಪತಿಗಳು ಮಾತ್ರ ರಾಜಕೀಯದಲ್ಲಿ ಯಶಸ್ವಿಯಾಗಲು ಸಾಧ್ಯ. ಸೇವಾ ಮನೋಭಾವದಿಂದ ಕೆಲಸ ಮಾಡುವವರು ರಾಜಕೀಯದಲ್ಲಿ ಬೆಳವಣಿಗೆಯಾಗುವುದು ಕಷ್ಟ ಎಂಬ ಮಾತು ಸುಳ್ಳು ಎಂಬುದನ್ನು ತಮಿಳುನಾಡು ಚುನಾವಣೆಯಲ್ಲಿ ಸಿಪಿಐನ ಅಭ್ಯರ್ಥಿ 'ಮಾರಿಮುತ್ತು'  ಸಾಬೀತು ಮಾಡಿದ್ದಾರೆ. ಜನರ ಸೇವೆ ನಿರಂತರವಾಗಿದ್ದರೇ ಅದಕ್ಕೆ ತಕ್ಕ ಸ್ಥಾನಮಾನ ತಾನೇ ತಾನಾಗಿ ಅರಸಿ ಬರುತ್ತದೆ ಎಂಬುದಕ್ಕೆ ಮಾರಿಮುತ್ತ ಪ್ರತ್ಯಕ್ಷ ನಿದರ್ಶನರಾಗಿದ್ದಾರೆ. 

ತಿರುತುರೈಪೂಂಡಿಯ ಬಡ ಕುಟುಂಬದ ವ್ಯಕ್ತಿ ಮತ್ತು ಗುಡಿಸಲು ನಿವಾಸಿ ಶಾಸಕರಾಗಿ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಸಿಪಿಐ ಪಕ್ಷ ಪರವಾಗಿ ತಿರುತುರೈಪೂಂಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾರಿಮುತ್ತು ಅವರನ್ನು ಜನರೇ ಗೆಲ್ಲಿಸಿ ಇದೀಗ ವಿಧಾನಸಭೆಗೆ ಕಳುಹಿಸಿದ್ದಾರೆ.

ತಮಿಳುನಾಡಿನ ತಿರುವರೂರು ಜಿಲ್ಲೆಯ ತಿರುತುರೈಪೂಂಡಿ ಕ್ಷೇತ್ರವನ್ನು ಗೆದ್ದ ಮಾರಿಮುತ್ತು ತಮ್ಮ ಪ್ರತಿ ಸ್ಪರ್ಧಿ ಎಐಎಡಿಎಂಕೆಯ ಕೋಟ್ಯಾಧಿಪತಿ ಅಭ್ಯರ್ಥಿ ಸುರೇಶ್ ಕುಮಾರ್ ಅವರನ್ನು ಸೋಲಿಸಿದ್ದಾರೆ. ಕೋಟ್ಯಾಧಿಪತಿ ಅಭ್ಯರ್ಥಿ ವಿರುದ್ಧದ ಹೋರಾಟದಲ್ಲಿ ಬಡ ಕೃಷಿಕ ಮಾರಿಮುತ್ತು ಜಯಗಳಿಸಿದ್ದಾರೆ. ಹಾಲಿ  ಚುನಾವಣೆಯಲ್ಲಿ ಮಾರಿಮುತ್ತು 95,785 ಮತಗಳನ್ನು ಪಡೆದರೆ, ಎಐಎಡಿಎಂಕೆಯ ಕೋಟ್ಯಾಧಿಪತಿ ಅಭ್ಯರ್ಥಿ ಸುರೇಶ್‌ ಕುಮಾರ್ 66,683 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಮಾರಿಮುತ್ತು 29102 ಮತಗಳ ಭಾರಿ ಅಂತರದಿಂದ ಜಯ ಗಳಿಸಿದ್ದಾರೆ. 

ತಿರುತುರೈಪೂಂಡಿ ಕ್ಷೇತ್ರದ ಕಡುವುಕುಡಿ ಗ್ರಾಮದ ನಿವಾಸಿಯಾದ 49 ವರ್ಷ ಮಾರಿಮುತ್ತು 1994 ರಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಸಮಾಜ ಸೇವೆಯಿಂದಲೇ ಖ್ಯಾತಿ ಪಡೆದಿರುವ ಅವರು ಸಿಪಿಐ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾರಿಮುತ್ತು ಅವರ ತಾಯಿ ಮತ್ತು ಪತ್ನಿ  ಜಯಸುಧಾ ಕೃಷಿ ಕಾರ್ಮಿಕರಾಗಿ ದಿನಗೂಲಿ ಮಾಡುತ್ತಿದ್ದು, ಮಗ ಮತ್ತು ಮಗಳು ಶಾಲೆಗೆ ಹೋಗುತ್ತಾರೆ. ಮಾರಿಮುತ್ತು ಅವರ ಗುಡಿಸಲಿನಲ್ಲಿ ಗ್ಯಾಸ್ ಸ್ಟೌವ್ ಇಲ್ಲ.. ಇಂದಿಗೂ ಅವರು ಮಣ್ಣಿನ ಒಲೆಯಲ್ಲೇ ಅಡುಗೆ ತಯಾರಿಸುತ್ತಾರೆ. ಮಾರಿಮುತ್ತು ಅವರ ಪತ್ನಿ ಹೆಸರಿನಲ್ಲಿ 75 ಸೆಂಟ್ಸ್ ಭೂಮಿಯನ್ನು ಹೊಂದಿದ್ದು,  ಇದರ ಮೌಲ್ಯ 1.75 ಲಕ್ಷ. ಅವರ ಬ್ಯಾಂಕ್ ಖಾತೆಯಲ್ಲಿ 58,000 ರೂ. ಇದ್ದು,  ಅವರ ಬಳಿ ಕೇವಲ ರೂ .3000 ನಗದು ಮಾತ್ರ ಇದೆ ಎಂದು ತಿಳಿದುಬಂದಿದೆ. 

ಇನ್ನು ಅವರ ಪತ್ನಿ ಮತ್ತು ಮಗಳು ಕಡಿಮೆ ಪ್ರಮಾಣದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ಮಾರಿಮುತ್ತ ಅವರ ವಿರುದ್ಧ ಸ್ಪರ್ಧಿಸಿದ ಎಐಎಡಿಎಂಕೆ ಅಭ್ಯರ್ಥಿ ಸುರೇಶ್ ಕುಮಾರ್ ಅವರ ಬಳಿ 20 ಕೋಟಿ ರೂ.ಗಳ ಆಸ್ತಿ ಇದೆ ಎಂದು ದಾಖಲೆಗಳು ತಿಳಿಸಿವೆ. 

ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟಗೊಂಡ ತಕ್ಷಣ, ಮಾರಿಮುತ್ತ ಅವರ ತಾಯಿ ಮತ್ತು ಹೆಂಡತಿ ತುಂಬಾ ಸಂತೋಷಗೊಂಡರು. ಮಾರಿಮುತ್ತು ಕೂಡಲೇ ತಮ್ಮ ತಾಯಿ ಆಶೀರ್ವಾದ ಪಡೆದರು. ಅಂತೆಯೇ ತಮ್ಮ ಮುಂದಿನ ಕರ್ತವ್ಯಕ್ಕಾಗಿ ಹೊರಟಿದ್ದಾರೆ. ಈ ಮೂಲಕ ಮಾರಿಮುತ್ತು  ಶಾಸಕರಾಗಬೇಕೆಂಬ ಕನಸು ಹೊತ್ತಿದ್ದ ಈ ಪ್ರದೇಶದ ಬಡ ರೈತರ ಕನಸು ಈಡೇರಿದ್ದು, ಅವರಿಗೆ ಹುಮ್ಮಸ್ಸು ಬಂದಿದೆ. 

ವಾಸವಾಗಿದ್ದ ಗುಡಿಸಲನ್ನೇ ಹೊತ್ತೊಯ್ದಿದ್ದ ಗಾಜಾ
ಇನ್ನು ಮಾರಿಮುತ್ತು ಅವರು ವಾಸಿಸುತ್ತಿದ್ದ ಗುಡಿಸಿಲನ್ನು ಎರಡು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಅಬ್ಬರಿಸಿದ್ದ ಗಾಜಾ ಚಂಡಮಾರುತವು ಹೊತ್ತೊಯ್ದಿತ್ತು. ಈ ವೇಳೆ ಸರ್ಕಾರ ತಮಗೆ ನೀಡಿದ್ದ 50 ಸಾವಿರ ರೂ ಪರಿಹಾರ ಮೊತ್ತವನ್ನು ತಾವು ಪಡೆಯದೇ ಅದೇ ಗ್ರಾಮದ ಮತ್ತೋರ್ವ ಬಡ ನಿವಾಸಿ ಪಟ್ಟಾ ಇಲ್ಲದ  ಅನರ್ಹ ಫಲಾನುಭವಿಗೆ ನೀಡಿ ದೊಡ್ಡತನ ಮೆರೆದಿದ್ದರು.  

ಈ ಹಿಂದೆ ಹೈಡ್ರೋಕಾರ್ಬನ್ ಯೋಜನೆ ಸೇರಿದಂತೆ ಹಲವು ಆಂದೋಲನಗಳಲ್ಲಿ ಮಾರಿಮುತ್ತು ಮುಂಚೂಣಿ ಹೋರಾಟಗಾರರಾಗಿ ಕಾಣಿಸಿಕೊಂಡಿದ್ದರು. ಒಂದು ದಶಕದಿಂದ ಸಿಪಿಐ ಕೊಟ್ಟೂರು ಕೇಂದ್ರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ತಿರುವರೂರು ಜಿಲ್ಲೆಯ ಮೀಸಲು ಕ್ಷೇತ್ರವಾದ ತಿರುತುರೈಪೂಂಡಿ  ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. 1971 ರಿಂದಲೂ ಈ ಕ್ಷೇತ್ರ ಸಿಪಿಐನ ಭದ್ರಕೋಟೆಯಾಗಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com