ದೇಶದಲ್ಲಿ ಕೊರೊನಾ 3ನೇ ಅಲೆ ನಿಶ್ಚಿತ; ಪ್ರಧಾನ ವೈಜ್ಞಾನಿಕ ಸಲಹೆಗಾರ ಎಚ್ಚರಿಕೆ

ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ಅಬ್ಬರದಿಂದ ದೇಶ ತತ್ತರಿಸುತ್ತಿರುವಾಗ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ್ ರಾಘವನ್ ಸಂಚಲನದ ಹೇಳಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ಅಬ್ಬರದಿಂದ ದೇಶ ತತ್ತರಿಸುತ್ತಿರುವಾಗ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ್ ರಾಘವನ್ ಸಂಚಲನದ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಕೊರೊನಾ ಮೂರನೇ ಅಲೆ ನಿಶ್ಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 3ನೇ ಅಲೆ ಯಾವಾಗ? ಹೇಗೆ ಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಅದರ ಅಪಾಯ ಇರುವುದಂತೂ ಸತ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಮೂರನೇ ಅಲೆಯಿಂದ ವೈರಸ್ ಮತ್ತಷ್ಟು ರೂಪಾಂತರಗೊಂಡು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಅಲೆಗಳು ಬರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ. ಹೊಸ ರೂಪಾಂತರಿ ವೈರಸ್ ಎದುರಿಸಲು ಲಸಿಕೆ ಸಿದ್ದವಾಗಿರಿಸಿಕೊಳ್ಳಬೇಕು ಎಂದು ವಿಜಯರಾಘವನ್ ಸಲಹೆ ನೀಡಿದ್ದಾರೆ. ಆದರೆ ಲಭ್ಯವಿರುವ ಲಸಿಕೆ ಪ್ರಸ್ತುತ ರೂಪಾಂತರಿ ವೈರಸ್ ವಿರುದ್ದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಸಾಂಕ್ರಾಮಿಕವನ್ನು ಅಂತ್ಯಗೊಳಿಸಲು, ಹೊಸ ರೀತಿಯ ವೈರಸ್‌ ಗಳನ್ನು ಎದುರಿಸಲು ಲಸಿಕೆ ಸಂಶೋಧನೆಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ವಿಜಯರಾಘವನ್ ಎಚ್ಚರಿಸಿದ್ದಾರೆ. ದೇಶದಲ್ಲಿ ಸಾಂಕ್ರಾಮಿಕ ಭಾರಿ ಪ್ರಮಾಣದಲ್ಲಿ ಹರಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನು ಎದುರಿಸಲು ಹಲವು ಬದಲಾವಣೆಗಳು, ಕಠಿಣ ನಿರ್ಬಂಧಗಳು ಹಾಗೂ ಮಾರ್ಗಸೂಚಿಗಳು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಆದರೆ, ದೇಶದಲ್ಲಿ ಕೊರೊನಾ ಪ್ರಕರಣಗಳು, ಸಾವುಗಳು ದಾಖಲೆಯ ಮಟ್ಟದಲ್ಲಿ ವರದಿಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 3.82 ಲಕ್ಷವಾಗಿದ್ದು, ವಾರದಲ್ಲಿ ಜಾಗತಿಕವಾಗಿ ವರದಿಯಾಗಿರುವ ಪ್ರಕರಣಗಳ ಪೈಕಿ ಭಾರತ ಶೇ 46 ರಷ್ಟು, ಕೊರೊನಾದಿಂದ ಉಂಟಾದ ಸಾವುಗಳಲ್ಲಿ  ಜಗತ್ತಿನ ಕಾಲು ಭಾಗ ಭಾರತದಲ್ಲಿ ಸಂಭವಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com