ಕರ್ನಾಟಕದಲ್ಲಿ ಕಳೆದ 15 ದಿನಗಳಿಂದ ಕೊರೊನಾ ಪರಿಸ್ಥಿತಿ ಹದಗೆಡುತ್ತಿದೆ: ಕೇಂದ್ರ ಸರ್ಕಾರ ಕಳವಳ

ಕರ್ನಾಟಕದ ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.
ಆರತಿ ಅಹುಜಾ
ಆರತಿ ಅಹುಜಾ

ನವದೆಹಲಿ: ಕರ್ನಾಟಕದ ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ದೆಹಲಿಯಲ್ಲಿ ಇಂದು ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಅವರು, 'ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚೆನ್ನೈ, ಕೊಯಿಕ್ಕೋಡ್,  ಗುರುಗ್ರಾಮ, ಮೈಸೂರು, ತುಮಕೂರು, ಚಿತ್ತೂರು ಜಿಲ್ಲೆ ಮತ್ತು ನಗರಗಳಲ್ಲಿಯೂ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಹಲವು ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ಇಳಿಕೆ
ಇದೇ ವೇಳೆ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಛತ್ತೀಸ್‌ಗಢ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಪ್ರಮಾಣ ಇಳಿಮುಖದತ್ತ ಸಾಗಿದೆ, ದೈನಂದಿನ ಸೋಂಕಿನ ಪ್ರಮಾಣ ಕೂಡ ಕಳೆದ ನಾಲ್ಕೈದು ದಿನಗಳಿಂದ ಇಳಿಕೆಯಾಗುತ್ತಿದೆ. ಆದರೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ,  ತಮಿಳುನಾಡು ಮತ್ತು ಒಡಿಶಾಗಳಲ್ಲಿ ದೈನಂದಿನ ಹೊಸ ಸೋಂಕಿನ ಪ್ರಕರಣಗಳಲ್ಲಿ ಮೇಲ್ಮುಖ ಪ್ರವೃತ್ತಿ ಇಂದೆ ಎಂದು ಆರತಿ ಅಹುಜಾ ಹೇಳಿದರು.

'ನಿನ್ನೆ ದೇಶದಲ್ಲಿ 4.14 ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 12 ರಾಜ್ಯಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ. 7 ರಾಜ್ಯಗಳಲ್ಲಿ 50 ಸಾವಿರದಿಂದ ಒಂದು ಲಕ್ಷ ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 29.9ರಷ್ಟಿದೆ. ಗೋವಾದಲ್ಲಿ ಟೆಸ್ಟಿಂಗ್  ಪಾಸಿಟಿವಿಟಿ ದರ ಶೇ.48.5ರಷ್ಟಿದೆ‌. ಇದು ಚಿಂತೆಯ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು. ದೇಶದಲ್ಲಿ ಈವರೆಗೆ 13.21 ಕೋಟಿ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 3.29 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದುವರೆಗೂ ಒಟ್ಟಾರೆ 16.50 ಕೋಟಿ ಡೋಸ್ ನೀಡಲಾಗಿದೆ. 18 ವರ್ಷ  ಮೇಲ್ಪಟ್ಟವರಿಗೆ 11.8 ಲಕ್ಷ ಡೋಸ್ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ 2ನೇ ಡೋಸ್ ಲಸಿಕೆ ನೀಡಲು ಹೆಚ್ಚಿನ‌ ಆದ್ಯತೆ ನೀಡಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

ಅಂತೆಯೇ ದೇಶದ ಎಲ್ಲ ಆಸ್ಪತ್ರೆಗಳ ಮೂಲ ಸೌಕರ್ಯ ವೃದ್ಧಿಯತ್ತ ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಎಂದು ಹೇಳಿದ ಅವರು, ಆಸ್ಪತ್ರೆಗಳಿಗೆ ನಿರಂತರ ವಿದ್ಯುತ್ ಪೂರೈಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ ಎಂದು ಹೇಳಿದರು. ಅಂತೆಯೇ ಮುಂಬರುವ ದಿನಗಳಲ್ಲಿ. ದೇಶದ  ವಿವಿಧೆಡೆ 162 ಆಕ್ಸಿಜನ್ ಪ್ಲಾಂಟ್ ಮಂಜೂರು ಮಾಡಲಾಗಿದೆ. ಈಗಾಗಲೇ 71 ಘಟಕಗಳನ್ನು ಅವಳಡಿಸಲಾಗಿದ್ದು, 109 ಪ್ಲಾಂಟ್​ಗಳನ್ನು ಮೇ ತಿಂಗಳ ಅಂತ್ಯದೊಳಗೆ ಅಳವಡಿಸಲಾಗುತ್ತದೆ. ಉಳಿದ ಆಕ್ಸಿಜನ್ ಪ್ಲಾಂಟ್​ಗಳ ಅವಳಡಿಕೆ ಕೆಲಸ ಜೂನ್ ತಿಂಗಳಲ್ಲಿ ಮುಗಿಯಲಿದೆ ಎಂದರು. ವಿದೇಶಗಳಿಂದ  ಹರಿದುಬರುತ್ತಿರುವ ನೆರವನ್ನು ಒಮ್ಮೆಲೆ ಎಲ್ಲ ರಾಜ್ಯಗಳಿಗೂ ಹಂಚಲು ಆಗುವುದಿಲ್ಲ. ಕೆಲವು ರಾಜ್ಯಗಳಿಗೆ ವಿದೇಶಿ ನೆರವು ಹಂಚಲಾಗಿದೆ. ಏಪ್ರಿಲ್ 27ರಿಂದಲೇ ವಿದೇಶಗಳಿಂದ ಬಂದ ನೆರವು ವಿವಿಧೆಡೆಗೆ ರವಾನೆಯಾಗುತ್ತಿದೆ. ಈವರೆಗೂ 11 ಸಾವಿರ ಉಪಕರಣಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ.  NDRFನಿಂದ ನಾಲ್ಕು ಆಕ್ಸಿಜನ್ ಪ್ಲಾಂಟ್ ಆಳವಡಿಸಲಾಗಿದೆ ಎಂದು ಆರತಿ ಅಹುಜಾ ಮಾಹಿತಿ ನೀಡಿದರು.

ವಿದೇಶಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರವಿ ಮಾತನಾಡಿ, ವಿದೇಶಗಳು ಭಾರತದೊಂದಿಗಿನ ಸದ್ಭಾವನೆಯ ಸಂಕೇತವಾಗಿ ನೆರವು ನೀಡುತ್ತಿವೆ. ನೆರವನ್ನು ವಿಶ್ಲೇಷಿಸಿ ವಿವಿಧೆಡೆಗೆ ರವಾನಿಸಲಾಗುತ್ತಿದೆ. ಅವರು ಕಳಿಸಿಕೊಟ್ಟ ವಸ್ತುಗಳನ್ನು ಹಂಚಿಕೆ ಮಾಡಿದ ಬಗ್ಗೆ ಸಂಬಂಧಿಸಿದ ದೇಶಗಳ ಸರ್ಕಾರಗಳಿಗೂ  ಮಾಹಿತಿ ನೀಡಲಾಗುತ್ತಿದೆ. ವಿದೇಶದಿಂದ ಬಂದ ಯಾವೊಂದು ನೆರವು ಸಹ ಹಂಚಿಕೆಗೆ ಬಾಕಿ ಉಳಿದಿಲ್ಲ ಎಂದು ಮಾಹಿತಿ ನೀಡಿದರು. ಇನ್ನು ಈ ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗದ ವಿ.ಕೆ.ಪೌಲ್ ಮತ್ತು ವಿಜಯ ರಾಘವನ್ ಕೂಡ ಪಾಲ್ಗೊಂಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com