ವಾಸ್ತವ ಅರಿಯದಿದ್ದರೆ ಪಾಠ ಕಲಿಯಲು ಸಾಧ್ಯವಿಲ್ಲ ಎಂದ ಸೋನಿಯಾ ಗಾಂಧಿ: ಚುನಾವಣೆ ಸೋಲಿನ ಪರಾಮರ್ಶೆಗೆ 'ತಂಡ' ರಚನೆಗೆ ಒಲವು

ಇತ್ತೀಚೆಗೆ ನಡೆದ ಕೇರಳ, ಅಸ್ಸಾಂ ವಿಧಾನಸಭೆ ಚುನಾವಣೆಗಳಲ್ಲಿ ಆಗ ಇದ್ದ ಸರ್ಕಾರವನ್ನು ಹೊರಹಾಕಲು ಕಾಂಗ್ರೆಸ್ ಏಕೆ ವಿಫಲವಾಯಿತು, ಪಶ್ಚಿಮ ಬಂಗಾಳದಲ್ಲಿ ಖಾತೆ ತೆರೆಯಲು ಸಂಪೂರ್ಣವಾಗಿ ಏಕೆ ವಿಫಲವಾದೆವು ಎಂದು ನಾವು ಈ ಸಂದರ್ಭದಲ್ಲಿ ಖಂಡಿತವಾಗಿಯೂ ಅರ್ಥಮಾಡಿಕೊಳ್ಳಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸೋನಿಯಾ ಗಾಂಧಿ
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸೋನಿಯಾ ಗಾಂಧಿ

ನವದೆಹಲಿ: ಇತ್ತೀಚೆಗೆ ನಡೆದ ಕೇರಳ, ಅಸ್ಸಾಂ ವಿಧಾನಸಭೆ ಚುನಾವಣೆಗಳಲ್ಲಿ ಆಗ ಇದ್ದ ಸರ್ಕಾರವನ್ನು ಹೊರಹಾಕಲು ಕಾಂಗ್ರೆಸ್ ಏಕೆ ವಿಫಲವಾಯಿತು, ಪಶ್ಚಿಮ ಬಂಗಾಳದಲ್ಲಿ ಖಾತೆ ತೆರೆಯಲು ಸಂಪೂರ್ಣವಾಗಿ ಏಕೆ ವಿಫಲವಾದೆವು ಎಂದು ನಾವು ಈ ಸಂದರ್ಭದಲ್ಲಿ ಖಂಡಿತವಾಗಿಯೂ ಅರ್ಥಮಾಡಿಕೊಳ್ಳಬೇಕಿದೆ ಎಂದು ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ವರ್ಚುವಲ್ ಮೂಲಕ ನಾಯಕರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಮಹಾಮಾರಿಯಿಂದ ದೇಶ ತತ್ತರಿಸಿ ಹೋಗುತ್ತಿರುವ ಸಂದರ್ಭದಲ್ಲಿ ನಾವಿಂದು ಸಭೆ ಸೇರಿ ಇತ್ತೀಚಿನ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಸೇರಿದ್ದೇವೆ. ಚುನಾವಣೆಯಲ್ಲಿ ನಾವು ಕಂಡ ವೈಫಲ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಫಲಿತಾಂಶದಿಂದ ತೀರಾ ನಿರಾಶರಾಗಿದ್ದೇವೆ ಎಂದು ಹೇಳುವುದು ಸಣ್ಣ ಮಾತಾಗಬಹುದು ಎಂದರು.

ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾದ ಪ್ರತಿಯೊಂದು ಅಂಶವನ್ನು ನೋಡಿ ಆ ಬಗ್ಗೆ ಶೀಘ್ರವೇ ವರದಿ ನೀಡಲು ಸಣ್ಣ ತಂಡವನ್ನು ರಚಿಸಲು ಉದ್ದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ನಮಗಾದ ಅಹಿತಕರ ಪಾಠದ ವಾಸ್ತವಾಂಶವನ್ನು ನಾವು ಎದುರಿಸದಿದ್ದರೆ, ವಾಸ್ತವ ಅರಿಯದಿದ್ದರೆ ಸರಿಯಾದ ಪಾಠ ಕಲಿಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸದಸ್ಯರಿಗೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಅಸ್ಸಾಂ ಪ್ರಧಾನ ಕಾರ್ಯದರ್ಶಿ ಜಿತೇಂದರ್ ಸಿಂಗ್, ಕೇರಳದ ತಾರಿಕ್ ಅನ್ವರ್, ತಮಿಳುನಾಡು ಮತ್ತು ಪುದುಚೇರಿಯ ಉಸ್ತುವಾರಿ ದಿನೇಶ್ ಗುಂಡುರಾವ್ ಮತ್ತು ಪಶ್ಚಿಮ ಬಂಗಾಳದ ಜಿತಿನ್ ಪ್ರಸಾದ್ ಅವರು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು  ಈ ಸಂದರ್ಭದಲ್ಲಿ ಹೇಳಬಹುದು. ಐದೂ ರಾಜ್ಯಗಳಲ್ಲಿ ನಮ್ಮ ಸಾಧನೆ, ಕೆಲಸಗಳನ್ನು ಈ ನಾಯಕರು ಪ್ರಾಮಾಣಿಕವಾಗಿ ಹೇಳಬಹುದು, ನಿರೀಕ್ಷೆಗಿಂತ ಕಳಪೆ ಮಟ್ಟದಲ್ಲಿ ನಮ್ಮ ಸಾಧನೆ ಏಕಾಯಿತು ಎಂದು ಈ ನಾಯಕರು ಹೇಳಬೇಕು, ಅವರು ವಾಸ್ತವಾಂಶವನ್ನು ಹೇಳಿದರೆ ಮುಂದಿನ ದಿನಗಳಲ್ಲಿ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು, ಮುಂದೆ ನಾವು ಏನು ಮಾಡಬೇಕೆಂದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ: ಇಂದಿನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸೋನಿಯಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವ ಬಗ್ಗೆ ಕೂಡ ಹೇಳಿದರು. ಜೂನ್ ತಿಂಗಳ ಕೊನೆಗೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆಯನ್ನು ಈ ಹಿಂದೆ ನಿಗದಿಪಡಿಸಲಾಗಿದ್ದು ಕೋವಿಡ್ ಹಿನ್ನೆಲೆಯಲ್ಲಿ ಯಾವ ರೀತಿ ನಡೆಸುವುದು ಎಂಬ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆಯಾಯಿತು.

ಕಳೆದ ಜನವರಿ 22ರಂದು ಸೇರಿದ್ದಾಗ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜೂನ್ ಕೊನೆಯ ವೇಳೆಗೆ ಮುಕ್ತಾಯವಾಗಬೇಕೆಂದು ನಿರ್ಧರಿಸಿದ್ದೆವು. ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿಯವರು ವೇಳಾಪಟ್ಟಿ ನಿಗದಿಪಡಿಸಿದ್ದರು ಎಂದರು.

ಕೋವಿಡ್-19: ಮೋದಿ ಸರ್ಕಾರ ಕೊರೋನಾ ಬಗ್ಗೆ ತೋರಿದ ಅಸಡ್ಡೆಯಿಂದಾಗಿ ಇಂದು ಇಡೀ ದೇಶ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿಗೆ ಬಂದಿದೆ.ತಮ್ಮ ಹಿತಕ್ಕಾಗಿ ಮಾಡಿಕೊಂಡ ಕೆಲವು ಕಾರ್ಯಕ್ರಮಗಳು, ಚುನಾವಣಾ ಪ್ರಚಾರಗಳಿಂದಾಗಿಯೇ ಇಂದು ಕೊರೋನಾ ಈ ಮಟ್ಟದಲ್ಲಿ ಹಬ್ಬಿದೆ ಎಂದು ಸೋನಿಯಾ ಗಾಂಧಿ ಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಆರೋಪಿಸಿದರು.

ಕೊರೋನಾ ಎರಡನೇ ಅಲೆ ನಿಯಂತ್ರಿಸಲಾಗದ ಮಟ್ಟಕ್ಕೆ ಬೆಳೆದಿದೆ. ಸದ್ಯದಲ್ಲಿಯೇ ಮೂರನೇ ಅಲೆ ಅಪ್ಪಳಿಸಬಹುದು ಎಂದು ಕೆಲವು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಕೆಲವು ರಾಜ್ಯಗಳು ಈಗಾಗಲೇ ಸಂಪೂರ್ಣ ಲಾಕ್ ಡೌನ್ ಘೋಷಿಸಿವೆ. ದೇಶಾದ್ಯಂತ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕುಸಿದಿದೆ ಎಂದು ಸೋನಿಯಾ ಗಾಂಧಿ ದೂಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com