ವೇದ ವಿದ್ವಾಂಸ ಸ್ವಾಮಿ ಓಂಕಾರಾನಂದ ಕೊರೋನಾ ಸೋಂಕಿನಿಂದ ನಿಧನ

ಥೇಣಿಯಲ್ಲಿನ ಚಿದ್ಭವಾನಂದ ಆಶ್ರಮದ ಸ್ಥಾಪಕ, ವೇದ ವಿದ್ವಾಂಸ, ತಿರುಕ್ಕುರಳ್ ಸೇರಿದಂತೆ ಹಲವು ತಮಿಳು ಗ್ರಂಥಗಳ ವಿದ್ವಾಂಸ ಸ್ವಾಮಿ ಓಂಕಾರಾನಂದ (64) ಕೋವಿಡ್-19 ಸೋಂಕಿನಿಂದ ಮೇ.10 ರಂದು ಮಧುರೈನ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. 
ಸ್ವಾಮಿ ಓಂಕಾರಾನಂದ
ಸ್ವಾಮಿ ಓಂಕಾರಾನಂದ

ಚೆನ್ನೈ: ಥೇಣಿಯಲ್ಲಿನ ಚಿದ್ಭವಾನಂದ ಆಶ್ರಮದ ಸ್ಥಾಪಕ, ವೇದ ವಿದ್ವಾಂಸ, ತಿರುಕ್ಕುರಳ್ ಸೇರಿದಂತೆ ಹಲವು ತಮಿಳು ಗ್ರಂಥಗಳ ವಿದ್ವಾಂಸ ಸ್ವಾಮಿ ಓಂಕಾರಾನಂದ (64) ಕೋವಿಡ್-19 ಸೋಂಕಿನಿಂದ ಮೇ.10 ರಂದು ಮಧುರೈನ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. 

ಪುದುಕೊಟ್ಟೈ ನ ಶ್ರೀ ಭುವನೇಶ್ವರಿ ಅವಧೂತ ವಿದ್ಯಾಪೀಠದ ಪೀಠಾಧಿಪತಿಗಳೂ ಆಗಿದ್ದ ಸ್ವಾಮಿ ಓಂಕಾರಾನಂದರ ಪಾರ್ಥಿವ ಶರೀರಕ್ಕೆ, ಕೋವಿಡ್-19 ನಿರ್ಬಂಧದ ಕಾರಣದಿಂದಾಗಿ ರಾತ್ರಿಯೇ ವಿಧಿವಿಧಾನಗಳೊಂದಿಗೆ ಸಮಾಧಿಗೆ ಸೇರಿಸಲಾಯಿತು. 

ಸ್ವಾಮಿ ಓಂಕಾರಾನಂದರು ತಾವು ಬದುಕಿದ್ದಾಗಲೇ ತಮ್ಮ ಸಮಾಧಿಯಾಗಬೇಕಿದ್ದ ಸ್ಥಳವನ್ನು ಗುರುತಿಸಿ, ತಮ್ಮ ಸಮಾಧಿಯನ್ನು ಅದೇ ಸ್ಥಳದಲ್ಲಿ ನಿರ್ಮಿಸಬೇಕೆಂದು ಅನುಯಾಯಿಗಳಿಗೆ ನಿರ್ದೇಶನ ನೀಡಿದ್ದರು. ಅದರಂತೆಯೇ ಈಗ ಸಮಾಧಿಯನ್ನು ಅದೇ ಸ್ಥಳದಲ್ಲಿ ನಿರ್ಮಿಸಲಾಗಿದೆ. 

ಇನ್ನು 10 ದಿನಗಳು ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ ಎಂದು ಆಶ್ರಮದ ಮೂಲಗಳು ಮಾಹಿತಿ ನೀಡಿದ್ದು, ಭಕ್ತಾದಿಗಳು ಆಶ್ರಮಕ್ಕೆ ಬರದೇ ಮನೆಯಿಂದಲೇ ಪ್ರಾರ್ಥನೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ. 

ಸ್ವಾಮಿ ಓಂಕಾರಾನಂದರ ಪೂರ್ವಾಶ್ರಮದ ಹೆಸರು ಮನೋಹರನ್ ಅಥವಾ ಗೊಸ್ತೇಶ್ವರ ಶರ್ಮಾ ಎಂಬುದಾಗಿತ್ತು. ವಿದ್ಯಾನಾಥ ಘನಪಾಠಿ ಹಾಗೂ ಅಲಮೇಲು ಅಮ್ಮಾಳ್ ಅವರ ಪುತ್ರರಾಗಿ 1956 ರಲ್ಲಿ ಕೊಯಂಬತ್ತೂರಿನ ಪೊರೂರ್ ನಲ್ಲಿ ಜನಿಸಿದ್ದ ಮನೋಹರನ್ ಸ್ವಾಮಿ ವಿವೇಕಾನಂದರ ಕೆಲಸಗಳಿಂದ, ಭಗವದ್ಗೀತೆ, ಉಪನಿಷತ್ ಗಳು ಹಾಗೂ ಇತರ ಗ್ರಂಥಗಳತ್ತ ಬಾಲ್ಯದಿಂದಲೇ ಪ್ರೇರಿತರಾಗಿದ್ದರು. ಸಂಪ್ರದಾಯ ಮತ್ತು ಸಂಸ್ಕೃತಿಯ ಜೀವನಶೈಲಿ ಹೊಂದಿದ್ದ ಕುಟುಂಬದಲ್ಲಿ ಜನಿಸಿದ್ದ ಮನೋಹರನ್ ವೈದಿಕ ಜೀವನವನ್ನು ಬಾಲ್ಯದಿಂದಲೇ ರೂಢಿಸಿಕೊಂಡಿದ್ದರು. ವೇದಗಳ ಮೇಲೆ ಹಿಡಿತ, ತಮಿಳು, ಸಂಸ್ಕೃತಗಳ ಮೇಲೆಯೂ ಪಾಂಡಿತ್ಯ ಸಂಪಾದಿಸಿದ್ದ ಅವರು ದೇಶದ ವಿದ್ವಾಂಸರುಗಳಿಂದ ಗೌರವ, ಮೆಚ್ಚುಗೆಗಳಿಗೆ ಪಾತ್ರರಾಗಿದ್ದರು. 

1979 ರಲ್ಲಿ ಮನೆ ಬಿಟ್ಟು ತೆರಳಿದ ಮನೋಹರನ್ 21 ದಿನಗಳ ಕಾಲ ಕೊಯಂಬತ್ತೂರಿನ ಕರಮಾಡೈ ಬಳಿ ಹಿಲ್ ರಾಕ್ ನಲ್ಲಿ ಧಾನ್ಯಸ್ಥರಾಗಿದ್ದರು. ತಾನು ಓರ್ವ ಸನ್ಯಾಸಿಯಾಗಬೇಕೆಂದು ಇದೇ ಅವಧಿಯಲ್ಲೆ ನಿರ್ಧರಿಸಿದ್ದ ಮನೋಹರನ್, ತಿರುಪ್ಪರೈತುರೈನಲ್ಲಿರುವ ಶ್ರೀ ರಾಮಕೃಷ್ಣ ತಪೋವನಮ್ ನ ಸ್ವಾಮಿ ಚಿದ್ಭವಾನಂದರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿ ಸ್ವಾಮಿ ಓಂಕಾರಾನಂದ ಎಂಬ ಯೋಗಪಟ್ಟವನ್ನು ಪಡೆದರು. 

ನಂತರದ ದಿನಗಳಲ್ಲಿ ಸ್ವಾಮಿ ದಯಾನಂದ ಸರಸ್ವತಿಗಳ ಅನುಯಾಯಿಗಳಾಗಿದ್ದ ಸ್ವಾಮಿ ಪರಮಾರ್ಥಾನಂದರಿಂದ ವೇದಾಂತ ಅಭ್ಯಾಸ ಮಾಡಿದರು. ಸ್ವಾಮಿ ಓಂಕಾರಾನಂದರು 30 ವರ್ಷಗಳಿಂದ ವೇದಾಂತವನ್ನು ಪ್ರಚಾರ ಮಾಡುತ್ತಿದ್ದರು.

ಸ್ವಾಮಿ ಓಂಕಾರಾನಂದರು ವೇದಾಂತ ಶಾಸ್ತ್ರ ಪ್ರಚಾರ ಟ್ರಸ್ಟ್ ನ್ನು ಸ್ಥಾಪಿಸಿದ್ದು, ಧಾರ್ಮಿಕ ಮಾರ್ಗದಲ್ಲಿ ನಡೆಯುವುದಕ್ಕೆ ಯುವಕರು, ವಿದ್ಯಾರ್ಥಿಗಳು ಹಾಗೂ ಭಕ್ತಾದಿಗಳಿಗೆ ತರಬೇತಿ ನೀಡುತ್ತದೆ. ಥೇವರಮ್, ತಿರುವಚಕಂ, ತಿರುಮಂದಿರಮ್, ತಾಯುಮನವರ್ ಅವರ ಪದ್ಯಗಳು, ಭಾರತೀಯಾರ್ ಅವರ ಹಾಡುಗಳು, ತಿರುಕ್ಕುರಳ್ ಗಳ ಮೇಲೆ ಸ್ವಾಮಿ ಓಂಕಾರಾನಂದರು ಅಪಾರ ಪಾಂಡಿತ್ಯ ಹೊಂದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com