ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸಿ, ಉಚಿತ ಸಾಮೂಹಿಕ ಲಸಿಕೆ ಪ್ರಾರಂಭಿಸಿ: ಪ್ರಧಾನಿಗೆ ವಿಪಕ್ಷ ನಾಯಕರ ಪತ್ರ

ದೇಶಾದ್ಯಂತ ಕೋವಿಡ್-19 ವಿರುದ್ಧ ಉಚಿತ ಸಾಮೂಹಿಕ ಲಸಿಕೆ ಅಭಿಯಾನಕ್ಕೆ ಆಗ್ರಹಿಸಿ 12 ಮಂದಿ ವಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶಾದ್ಯಂತ ಕೋವಿಡ್-19 ವಿರುದ್ಧ ಉಚಿತ ಸಾಮೂಹಿಕ ಲಸಿಕೆ ಅಭಿಯಾನಕ್ಕೆ ಆಗ್ರಹಿಸಿ 12 ಮಂದಿ ವಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. 

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್, ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿದಂತೆ 12 ಮಂದಿ ವಿಪಕ್ಷ ನಾಯಕರು ಪ್ರಧಾನಿಗೆ ಒಟ್ಟಿಗೆ ಪತ್ರ ಬರೆದಿದ್ದು, ಅಗತ್ಯವಿರುವವರಿಗೆ ಆಹಾರ ಧಾನ್ಯಗಳನ್ನು ನೀಡುವಂತೆ ಹಾಗೂ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 6,000 ರೂಪಾಯಿಗಳನ್ನು ನೀಡುವಂತೆ ಪ್ರಧಾನಿಗೆ ಆಗ್ರಹಿಸಿದ್ದಾರೆ. 

ಕೇಂದ್ರ ಸರ್ಕಾರ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಕೈಬಿಟ್ಟು ಉಚಿತ ಸಾಮೂಹಿಕ ಲಸಿಕೆ ಅಭಿಯಾನ ಪ್ರಾರಂಭಿಸಬೇಕು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ಹಿಂಪಡೆದು, ಪ್ರತಿಭಟನಾ ನಿರತ ರೈತರನ್ನು ಸಾಂಕ್ರಾಮಿಕಕ್ಕೆ ತುತ್ತಾಗುವುದರಿಂದ ತಡೆಗಟ್ಟಬೇಕೆಂದು ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ. 

12 ಮಂದಿ ನಾಯಕರ ಪೈಕಿ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ (ಶಿವಸೇನೆ) ಮಮತಾ ಬ್ಯಾನರ್ಜಿ, ಎಂಕೆ ಸ್ಟ್ಯಾಲಿನ್, ಹೇಮಂತ್ ಸೋರೇನ್ (ಜೆಎಂಎಂ), ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಅಖಿಲೇಶ್ ಯಾದವ್ ಕೂಡ ಸಹಿ ಹಾಕಿದ್ದಾರೆ. 

"ಕೋವಿಡ್-19 ದೇಶದಲ್ಲಿ ಹಿಂದೆಂದೂ ಕಾಣದೇ ಇರುವ ಮಾನವ ದುರಂತವನ್ನು ಸೃಷ್ಟಿಸಿದ್ದು, ಪತ್ರದಲ್ಲಿರುವ ಕ್ರಮಗಳನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕಾಗಿರುವುದು ಕಡ್ಡಾಯವಾಗಿದೆ. 

ಆದರೆ ನಿಮ್ಮ ಸರ್ಕಾರ ನಮ್ಮ ಸಲಹೆಗಳನ್ನು ನಿರ್ಲಕ್ಷಿಸಿದೆ ಅಥವಾ ತಿರಸ್ಕರಿಸಿದ್ದರ ಪರಿಣಾಮವಾಗಿ ದೇಶ ಇಂದು ಇಂತಹ ದುರಂತವನ್ನು ಎದುರಿಸಬೇಕಾಗಿದೆ" ಎಂದು ವಿಪಕ್ಷ ನಾಯಕರು ಪ್ರಧಾನಿಗೆ ತೀಕ್ಷ್ಣವಾಗಿ ಬರೆದಿದ್ದಾರೆ. 

"ವಿಪಕ್ಷ ನಾಯಕರು ನೀಡಿರುವ ಸಲಹೆಗಳನ್ನು ಕೇಂದ್ರ ಸರ್ಕಾರ ಪರಿಗಣಿಸಿ ಅದನ್ನು ಸಮರೋಪಾದಿಯಲ್ಲಿ ಜಾರಿಗೊಳಿಸುವ ಅಗತ್ಯವಿದೆ. ಜಾಗತಿಕ ಅಥವಾ ದೇಶೀಯವಾಗಿ ಲಭ್ಯವಿರುವ ಮೂಲಗಳಿಂದ ಲಸಿಕೆಗಳನ್ನು ಕೇಂದ್ರ ಸರ್ಕಾರ ಖರೀದಿಸಿ ತಕ್ಷಣವೇ ಉಚಿತ ಸಾಮೂಹಿಕ ಲಸಿಕೆ ಅಭಿಯಾನ ಪ್ರಾರಂಭಿಸಬೇಕಿದೆ. ಇದಕ್ಕಾಗಿ ಲಸಿಕೆಗಳಿಗಾಗಿ ಇರುವ ಬಜೆಟ್ ನ 35,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿ, ದೇಶೀಯವಾಗಿ ಲಸಿಕೆ ಉತ್ಪಾದನೆಯನ್ನು ವಿಸ್ತರಿಸುವುದಕ್ಕಾಗಿ ಕಡ್ಡಾಯ ಪರವಾನಗಿ ಜಾರಿಗೆ ತನ್ನಿ" ಎಂದು 12 ಮಂದಿ ವಿಪಕ್ಷ ನಾಯಕರು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com