ಕೋವಿಶೀಲ್ಡ್ ಲಸಿಕೆ ಡೋಸ್ ಗಳ ನಡುವಿನ ಅಂತರ 12-16 ವಾರಗಳ ವಿಸ್ತರಣೆಗೆ ಕೇಂದ್ರ ಸರ್ಕಾರ ಒಪ್ಪಿಗೆ!
ಕೋವಿಶೀಲ್ಡ್ ಲಸಿಕೆ ಡೋಸ್ ಗಳ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ ವಿಸ್ತರಿಸಬೇಕೆಂಬ ಸರ್ಕಾರದ ಸಮಿತಿಯೊಂದರ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಅನುಮೋದಿಸಿರುವುದಾಗಿ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
Published: 13th May 2021 07:42 PM | Last Updated: 13th May 2021 08:00 PM | A+A A-

ಕೋವಿಶೀಲ್ಡ್
ನವದೆಹಲಿ: ಕೋವಿಶೀಲ್ಡ್ ಲಸಿಕೆ ಡೋಸ್ ಗಳ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ ವಿಸ್ತರಿಸಬೇಕೆಂಬ ಸರ್ಕಾರದ ಸಮಿತಿಯೊಂದರ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಅನುಮೋದಿಸಿರುವುದಾಗಿ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
ಆದಾಗ್ಯೂ, ಕೋವಾಕ್ಸಿನ್ ಲಸಿಕೆ ಡೋಸ್ ಗಳ ನಡುವಣ ಅಂತರಕ್ಕೆ ರೋಗ ನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ
ಗುಂಪು (ಎನ್ ಟಿಎಜಿಐ) ಯಾವುದೇ ಬದಲಾವಣೆಯನ್ನು ಸೂಚಿಸಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಲಭ್ಯವಿರುವ ವಿಶೇಷವಾಗಿ ಇಂಗ್ಲೆಂಡ್ ನಲ್ಲಿನ ನೈಜ- ಜೀವನ ಪುರಾವೆ ಆಧರಿಸಿ ಕೋವಿಶೀಲ್ಡ್ ಲಸಿಕೆ ಡೋಸ್ ಗಳ ನಡುವಿನ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲು ಕೋವಿಡ್-19 ಕುರಿತ ತಜ್ಞರ ಸಮಿತಿ ಒಪ್ಪಿಕೊಂಡಿದೆ. ಕೋವಾಕ್ಸಿನ್ ಲಸಿಕೆ ಡೋಸ್ ಗಳ ನಡುವಣ ಅಂತರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಡ್ ಲಸಿಕೆ ಎರಡು ಡೋಸ್ ಗಳ ನಡುವಿನ ಅಂತರ ಪ್ರಸ್ತುತ 6-8 ವಾರಗಳಷ್ಟಿದೆ.
ಅನೇಕ ರಾಜ್ಯಗಳಲ್ಲಿ ಲಸಿಕೆ ಕೊರತೆ ವರದಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಹೆಚ್ಚುತ್ತಿರುವ ಬೇಡಿಕೆಗನುಗುಣವಾಗಿ ಲಸಿಕೆ ಪೂರೈಕೆಯಲ್ಲಿ ಕೊರತೆಯಾಗಿರುವುದರಿಂದ ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳು ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಿವೆ.
ಕೋವಿಶೀಲ್ಡ್ ಲಸಿಕೆ ಡೋಸ್ ಗಳ ನಡುವಿನ ಅಂತರವನ್ನು ಎರಡನೇ ಬಾರಿಗೆ ಹೆಚ್ಚಳ ಮಾಡಲಾಗಿದೆ. ಲಸಿಕೆ ಡೋಸ್ ಗಳ ನಡುವಣ ಅಂತರವನ್ನು 28 ದಿನಗಳಿಂದ 6-8 ವಾರಗಳಿಗೆ ವಿಸ್ತರಿಸುವಂತೆ ಮಾರ್ಚ್ ತಿಂಗಳಿನಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು.
ನೀತಿ ಆಯೋಗದ ಸದಸ್ಯ ಡಾ. ವಿಕೆ. ಪೌಲ್ ನೇತೃತ್ವದಲ್ಲಿನ ಕೋವಿಡ್-19 ಲಸಿಕೆ ನೀಡಿಕೆ ಕುರಿತ ರಾಷ್ಟ್ರೀಯ ತಜ್ಞರ ಸಮಿತಿ ನಿನ್ನೆ ನಡೆದ ಸಭೆಯಲ್ಲಿ ಕೋವಿಡ್-19 ವರ್ಕಿಂಗ್ ಗ್ರೂಪ್ ಶಿಫಾರಸನ್ನು ಒಪ್ಪಿಕೊಂಡಿದೆ ಎಂದು ಸಚಿವಾಲಯ ಹೇಳಿದೆ.
ಐಎನ್ ಸಿಎಲ್ ಇಎನ್ ಟ್ರಸ್ಟ್ ನಿರ್ದೇಶಕ ಡಾ. ಎನ್. ಕೆ. ಅರೋರಾ ನೇತೃತ್ವದಲ್ಲಿನ ಕೋವಿಡ್-19 ವರ್ಕಿಂಗ್ ಗ್ರೂಪ್ ನಲ್ಲಿ
ಪುದುಚೇರಿಯ ಜಿಐಪಿಎಂಇಆರ್ ಡೀನ್, ಡಾ. ರಾಕೇಶ್ ಅಗರ್ ವಾಲ್, ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಪ್ರೊಫೆಸರ್
ಡಾ. ಗಗನ್ ದೀಪ್ ಕಾಂಗ್, ಮತ್ತಿತರರು ಸದಸ್ಯರಾಗಿದ್ದಾರೆ.