ಬೆಂಗಳೂರು ರೈಲ್ವೆ ಆಸ್ಪತ್ರೆ ಹಾಗೂ ಕೇಂದ್ರಗಳಲ್ಲಿ ಕೋವಿಡ್-19 ಲಸಿಕೆ ಅಭಿಯಾನ ತಾತ್ಕಾಲಿಕ ಸ್ಥಗಿತ
ಸರ್ಕಾರದಿಂದ ಬೆಂಗಳೂರು ರೈಲ್ವೆ ವಿಭಾಗಕ್ಕೆ ಲಸಿಕೆಗಳ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ರೈಲ್ವೆ ಆಸ್ಪತ್ರೆ ಹಾಗೂ ಅದರ ಕೇಂದ್ರಗಳಲ್ಲಿ ಲಸಿಕೆ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Published: 13th May 2021 07:36 PM | Last Updated: 13th May 2021 07:36 PM | A+A A-

ಕೋವಿಡ್-19 ಲಸಿಕೆ ಅಭಿಯಾನ ತಾತ್ಕಾಲಿಕ ಸ್ಥಗಿತ
ಬೆಂಗಳೂರು: ಸರ್ಕಾರದಿಂದ ಬೆಂಗಳೂರು ರೈಲ್ವೆ ವಿಭಾಗಕ್ಕೆ ಲಸಿಕೆಗಳ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ರೈಲ್ವೆ ಆಸ್ಪತ್ರೆ ಹಾಗೂ ಅದರ ಕೇಂದ್ರಗಳಲ್ಲಿ ಲಸಿಕೆ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರೈಲ್ವೆ ಆಸ್ಪತ್ರೆ ಹಾಗೂ ಅದರ ಕೇಂದ್ರಗಳಲ್ಲಿ ರೈಲ್ವೆ ನೌಕರರು, ಮಾಜಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರುಗಳಿಗೆ ಲಸಿಕೆ ನೀಡುವ ಅಭಿಯಾನ ಚಾಲ್ತಿಯಲ್ಲಿತ್ತು. ಆದರೆ ಇದು ಬುಧವಾರ (ಮೇ.12) ರಿಂದ ಸ್ಥಗಿತಗೊಂಡಿದೆ.
ರೈಲ್ವೆ ಆಸ್ಪತ್ರೆ ಹಾಗೂ ಯಶವಂತಪುರ, ಕಂಟೋನ್ಮೆಂಟ್ ಗಳಲ್ಲಿ ನಾಲ್ಕು ಹಾಗೂ ಬಂಗಾರಪೇಟೆ ಹಾಗೂ ಹಿಂದೂಪುರದಲ್ಲಿ ತಲಾ ಒಂದು ರೈಲ್ವೆ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಅಭಿಯಾನವನ್ನು ಕೈಗೊಳ್ಳಲಾಗಿತ್ತು.
ರೈಲ್ವೆ ಉನ್ನತ ಮಟ್ಟದ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, "ರೈಲ್ವೆ ಆಸ್ಪತ್ರೆಗೆ ಬಿಬಿಎಂಪಿಯಿಂದ ಪ್ರತಿ ನಿತ್ಯ 10-15 ಲಸಿಕೆ ವಯಲ್ಸ್ (1 ವಯಲ್ ನಲ್ಲಿ 10 ಡೋಸ್ ಗಳಿಗೆ ಆಗುವಷ್ಟು ಲಸಿಕೆ ಇರುತ್ತದೆ) ನ್ನು ನೀಡಲಾಗುತ್ತಿತ್ತು, ಅಂತೆಯೇ 5 ಡೋಸ್ ಗಳನ್ನು ಬೆಂಗಳೂರಿನ ಇತರ ಎರಡು ಕೇಂದ್ರಗಳಿಗೆ ನೀಡಲಾಗುತ್ತಿತ್ತು. ಬಂಗಾರಪೇಟೆ ಹಾಗೂ ಹಿಂದೂಪುರದ ಕೆಂದ್ರಗಳಿಗೆ 2-3 ಡೋಸ್ ಗಳು ಪ್ರತಿ ನಿತ್ಯ ಲಭ್ಯವಾಗುತ್ತಿತ್ತು.
ಆದರೆ ಕ್ರಮೇಣ, ಕಳೆದ ಕೆಲವು ದಿನಗಳಿಂದ ಲಸಿಕೆ ಪ್ರಮಾಣವನ್ನು ಕಡಿಮೆ ಮಾಡಲಾಯಿತು. ಮೇ.12 ರಂದು ಲಸಿಕೆ ಬರಲೇ ಇಲ್ಲ. ಆದ್ದರಿಂದ ಬುಧವಾರದಂದು ಯಾರಿಗೂ ಲಸಿಕೆ ಲಭ್ಯವಾಗಿಲ್ಲ, ಗುರುವಾರಕ್ಕೂ ದಾಸ್ತಾನು ಇಲ್ಲ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರೈಲ್ವೆ ನೌಕರರನ್ನು ಮುನ್ನೆಲೆ ಕಾರ್ಯಕರ್ತರೆಂದು ಪರಿಗಣಿಸಿದ್ದು, ಈಗಾಗಲೇ ಹಲವರು ಮೊದಲ ಡೋಸ್ ನ್ನು ಪಡೆದಿದ್ದಾರೆ. 8,000 ಮಂದಿ ಉದ್ಯೋಗಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದರೆ, 2,000 ಮಂದಿಗೆ ಎರಡು ಡೋಸ್ ಗಳನ್ನು ಪೂರ್ಣಗೊಳಿಸಲಾಗಿದೆ, ಬಿಬಿಎಂಪಿ ಅಧಿಕಾರಿಗಳು ಲಸಿಕೆ ಪೂರೈಕೆ ಕೊರತೆಯನ್ನು ಕಾರಣವಾಗಿ ನೀಡಿದ್ದು, ಮೇ.17 ರ ನಂತರವಷ್ಟೇ ರೈಲ್ವೆ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ಪುನಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.