ಆಗಸ್ಟ್ ವೇಳೆಗೆ ಸೆರಂ ಇನ್ಸ್ಟಿಟ್ಯೂಟ್ ನಿಂದ 10 ಕೋಟಿ ಡೋಸ್, ಭಾರತ್ ಬಯೋಟೆಕ್ ನಿಂದ 7.8 ಕೋಟಿ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ!

ಹಲವು ರಾಜ್ಯಗಳಲ್ಲಿ ಕೋವಿಡ್ ಲಸಿಕೆಗಳಿಗೆ ಕೊರತೆಯುಂಟಾಗಿದೆ, ಈ ಹೊತ್ತಿನಲ್ಲಿ ದೇಶದ ಲಸಿಕೆ ತಯಾರಿಕಾ ಸಂಸ್ಥೆಗಳಾದ ಸೆರಂ ಇನ್ಸ್ ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕೇಂದ್ರ ಸರ್ಕಾರಕ್ಕೆ ಮುಂದಿನ ನಾಲ್ಕು ತಿಂಗಳ ಉತ್ಪಾದನೆ ಯೋಜನೆಯನ್ನು ಸಲ್ಲಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹಲವು ರಾಜ್ಯಗಳಲ್ಲಿ ಕೋವಿಡ್ ಲಸಿಕೆಗಳಿಗೆ ಕೊರತೆಯುಂಟಾಗಿದೆ, ಈ ಹೊತ್ತಿನಲ್ಲಿ ದೇಶದ ಲಸಿಕೆ ತಯಾರಿಕಾ ಸಂಸ್ಥೆಗಳಾದ ಸೆರಂ ಇನ್ಸ್ ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕೇಂದ್ರ ಸರ್ಕಾರಕ್ಕೆ ಮುಂದಿನ ನಾಲ್ಕು ತಿಂಗಳ ಉತ್ಪಾದನೆ ಯೋಜನೆಯನ್ನು ಸಲ್ಲಿಸಿವೆ.

ಸೆರಂ ಇನ್ಸ್ ಟಿಟ್ಯೂಟ್ ಆಗಸ್ಟ್ ವೇಳೆಗೆ 10 ಕೋಟಿಯವರೆಗೆ ಮತ್ತು ಭಾರತ್ ಬಯೋಟೆಕ್ 7.8 ಕೋಟಿಯವರೆಗೆ ಲಸಿಕೆ ಡೋಸ್ ಉತ್ಪಾದನೆ ಮಾಡಬಹುದು ಎಂದು ತಿಳಿಸಿವೆ.

ದೇಶದಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚುತ್ತಿದೆ, ಹೀಗಿರುವಾಗ ಆಗಸ್ಟ್ ಸೆಪ್ಟೆಂಬರ್ ಹೊತ್ತಿಗೆ ಪ್ರತಿ ತಿಂಗಳು ಎಷ್ಟು ಲಸಿಕೆಗಳನ್ನು ತಯಾರು ಮಾಡಬಹುದು ಎಂದು ಎರಡೂ ಸಂಸ್ಥೆಗಳಿಂದ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ವಿವರಣೆ ಕೇಳಿತ್ತು. 

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ದೇಶೀಯವಾಗಿ ಕೊವಾಕ್ಸಿನ್ ನ್ನು ಮತ್ತು ಆಕ್ಸ್ ಫರ್ಡ್ ಆಸ್ಟ್ರಝೆನಕಾದ ಕೋವಿಶೀಲ್ಡ್ ನ್ನು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ತಯಾರಿಸುತ್ತಿವೆ. ಭಾರತದಲ್ಲಿ ಈ ಎರಡೂ ಲಸಿಕೆಗಳಿಗೆ ಬಹಳ ಬೇಡಿಕೆಯಿದೆ.

ಭಾರತ್ ಬಯೋಟೆಕ್ ಸಂಸ್ಥೆಯ ನಿರ್ದೇಶಕ ಡಾ ವಿ ಕೃಷ್ಣ ಮೋಹನ್ ಅವರು ಸರ್ಕಾರಕ್ಕೆ ವರದಿ ನೀಡಿ, ಜುಲೈ ಹೊತ್ತಿಗೆ ಕೊವಾಕ್ಸಿನ್ ಉತ್ಪಾದನೆಯನ್ನು 3.32 ಕೋಟಿಗಳಿಗೆ ಹೆಚ್ಚಿಸಬಹುದು, ಆಗಸ್ಟ್ ಹೊತ್ತಿಗೆ 7.82 ಕೋಟಿಗೆ ಹೆಚ್ಚಳ ಮಾಡಬಹುದು, ಸೆಪ್ಟೆಂಬರ್ ತಿಂಗಳಲ್ಲಿಯೂ ಸರಿಸುಮಾರು ಅಷ್ಟೇ ಉತ್ಪಾದನೆ ಮಾಡಬಹುದು ಎಂದು ಹೇಳಿದ್ದಾರೆ.

ಸೆರಂ ಇನ್ಸ್ ಟಿಟ್ಯೂಟ್ ನ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್, ಕೋವಿಶೀಲ್ಡ್ ಉತ್ಪಾದನೆಯನ್ನು ಆಗಸ್ಟ್ ಹೊತ್ತಿಗೆ 10 ಕೋಟಿಗೆ ಹೆಚ್ಚಳ ಮಾಡಬಹುದು, ಸೆಪ್ಟೆಂಬರ್ ನಲ್ಲಿ ಕೂಡ ಸರಿಸುಮಾರು ಅಷ್ಟೇ ಉತ್ಪಾದನೆ ಮಾಡಬಹುದು ಎಂದು ತಿಳಿಸಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರಕ್ಕೆ ಈಗ ನೀಡಿರುವ ಉತ್ಪಾದನೆಯ ಪ್ರಮಾಣವನ್ನು ಈಡೇರಿಸಲು ಎರಡೂ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಕೋವಿಶೀಲ್ಡ್ ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸಲು ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ನೋಡುತ್ತಿದ್ದೇವೆ. ಜೂನ್,ಜುಲೈ ಹೊತ್ತಿಗೆ ಉತ್ಪಾದನೆ ಸಾಮರ್ಥ್ಯ ಹೆಚ್ಚಳವಾಗಬಹುದು ಎಂದು ಪ್ರಕಾಶ್ ಕುಮಾರ್ ಸಿಂಗ್ ಆರೋಗ್ಯ ಸಚಿವಾಲಯಕ್ಕೆ ತಿಳಿಸಿದ್ದಾರೆ.

ದೇಶೀಯ ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಅನುಕೂಲವಾಗುವಂತೆ ರಚಿಸಲಾದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ರಜನೀಶ್ ಟಿಂಗಲ್, ಔಷಧ ವಿಭಾಗದ ಜಂಟಿ ಕಾರ್ಯದರ್ಶಿ ಡಾ.ಮಂದೀಪ್ ಭಂಡಾರಿ ಅವರನ್ನೊಳಗೊಂಡ ಅಂತರ ಸಚಿವಾಲಯ ತಂಡ ಎರಡೂ ಉತ್ಪಾದನಾ ಕೇಂದ್ರಗಳಿಗೆ ಕಳೆದ ಏಪ್ರಿಲ್ ನಲ್ಲಿ ಭೇಟಿ ನೀಡಿತ್ತು.

ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ದೇಶೀಯ ಪೂರೈಕೆ ಕಡಿಮೆಯಾಗಿರುವುದರಿಂದ ಲಸಿಕೆ ಖರೀದಿಗೆ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯಲು ಮುಂದಾಗಿವೆ.

ಹೆಚ್ಚುವರಿ ಕೊವಾಕ್ಸಿನ್ ಡೋಸ್ ಗಳನ್ನು ನೀಡಲು ಸಾಧ್ಯವಿಲ್ಲ ಎಂದು ಭಾರತ್ ಬಯೋಟೆಕ್ ತಿಳಿಸಿರುವುದಾಗಿ ಗೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ದೆಹಲಿಯಲ್ಲಿ ಕೊವಾಕ್ಸಿನ್ ಸಂಗ್ರಹ ಮುಗಿದಿದ್ದು ಸುಮಾರು 100 ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ.

ಮೇ-ಜೂನ್ ಹೊತ್ತಿಗೆ ದೇಶೀಯ ಕೊವಾಕ್ಸಿನ್ ಉತ್ಪಾದನಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿ, ಜುಲೈ-ಆಗಸ್ಟ್ ಹೊತ್ತಿಗೆ 6ರಿಂದ 7 ಪಟ್ಟು ಹೆಚ್ಚಿಸಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com