ತೂತುಕುಡಿ ಸ್ಟೆರ್ಲೈಟ್‌ನಲ್ಲಿ ಆಮ್ಲಜನಕ ಉತ್ಪಾದನೆ ಆರಂಭ: ತಿರುನಲ್ವೇಲಿ ಆಸ್ಪತ್ರೆಗೆ 4.82 ಟನ್ ಆಕ್ಸಿಜನ್ ರವಾನೆ

ತೂತುಕುಡಿಯಲ್ಲಿರುವ ವೇದಾಂತ ಕಂಪನಿಯ ಸ್ಟೆರ್ಲೈಟ್‌ ತಾಮ್ರದ ಕಾರ್ಖಾನೆಯಲ್ಲಿ ಆಮ್ಲಜನಕ ಉತ್ಪಾದನೆ ಆರಂಭವಾಗಿದ್ದು, ಉತ್ಪಾದನೆಗೊಂಡ ಆಮ್ಲಜನಕವನ್ನು ಹೊತ್ತ ಮೊದಲ ಟ್ಯಾಂಕರ್‌ ಅನ್ನು ಗುರುವಾರ ತಿರುನಲ್ವೇಲಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ತೂತುಕುಡಿ ಸ್ಟೆರ್ಲೈಟ್‌ನಲ್ಲಿ ಆಮ್ಲಜನಕ ಉತ್ಪಾದನೆ
ತೂತುಕುಡಿ ಸ್ಟೆರ್ಲೈಟ್‌ನಲ್ಲಿ ಆಮ್ಲಜನಕ ಉತ್ಪಾದನೆ

ಚೆನ್ನೈ: ತೂತುಕುಡಿಯಲ್ಲಿರುವ ವೇದಾಂತ ಕಂಪನಿಯ ಸ್ಟೆರ್ಲೈಟ್‌ ತಾಮ್ರದ ಕಾರ್ಖಾನೆಯಲ್ಲಿ ಆಮ್ಲಜನಕ ಉತ್ಪಾದನೆ ಆರಂಭವಾಗಿದ್ದು, ಉತ್ಪಾದನೆಗೊಂಡ ಆಮ್ಲಜನಕವನ್ನು ಹೊತ್ತ ಮೊದಲ ಟ್ಯಾಂಕರ್‌ ಅನ್ನು ಗುರುವಾರ ತಿರುನಲ್ವೇಲಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ದೇಶದಲ್ಲಿ ಮಾರಕ ಕೊರೋನಾ ಸಾಂಕ್ರಾಮಿಕದ 2ನೇ ಅಲೆಯ ಅಬ್ಬರ ಜೋರಾಗಿರುವಂತೆಯೇ ಇತ್ತ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಅಭಾವ ಕೂಡ ಮುಂದುವರೆದಿದೆ. ಈ ಪೈಕಿ ಒಂದು ಸಮಾಧಾನಕರ ಸುದ್ದಿ ಬಂದಿದ್ದು, ತೂತುಕುಡಿಯಲ್ಲಿರುವ ವೇದಾಂತ ಕಂಪನಿಯ ಸ್ಟೆರ್ಲೈಟ್‌ ತಾಮ್ರದ ಕಾರ್ಖಾನೆಯಲ್ಲಿ  ಆಮ್ಲಜನಕ ಉತ್ಪಾದನೆ ಆರಂಭವಾಗಿದೆ. ಅಷ್ಟೇ ಅಲ್ಲದೆ ಘಟಕದಲ್ಲಿ ಉತ್ಪಾದನೆಯಾದ ಮೊದಲ ಹಂತದ ಸುಮಾರು 4.82 ಟನ್ ಆಮ್ಲಜನಕವನ್ನು ತಿರುನಲ್ವೇಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತಮಿಳುನಾಡು ವೈದ್ಯಕೀಯ ವಿಜ್ಞಾನ ನಿಗಮ (TVMCH) ಮೇಲುಸ್ತುವಾರಿಯಲ್ಲಿ ಈ ಆಕ್ಸಿಜನ್ ಘಟಕವನ್ನು  ನಿರ್ವಹಣೆ ಮಾಡಲಾಗುತ್ತಿದ್ದು, ಆಕ್ಸಿಜನ್ ಅನ್ನು ಆಸ್ಪತ್ರೆಗೆ ರವಾನೆ ಮಾಡುವ ಮುನ್ನ ಆಕ್ಸಿಜನ್ ಶುದ್ಧತೆಯನ್ನು ಇಲ್ಲಿನ ಕ್ವಾಲಿಟಿ ಕಂಟ್ರೋಲ್ ಲ್ಯಾಬ್ ನಲ್ಲಿ ಪರೀಕ್ಷಿಸಲಾಗಿದ್ದು, ಇಲ್ಲಿ ಉತ್ಪಾದನೆಯಾದ ಆಮ್ಲಜನಕ ಶೇ.98.6ರಷ್ಟು ಶುದ್ಧವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ದೇಶದಲ್ಲಿ ಆಮ್ಲಜನಕ್ಕೆ ತೀವ್ರ ಅಭಾವ ಉಂಟಾದ ಕಾರಣ ಏಪ್ರಿಲ್‌ 26ರಂದು ಎಐಎಡಿಎಂಕೆ ಸರ್ಕಾರ ನಾಲ್ಕು ತಿಂಗಳ ಅವಧಿಗೆ ಆಮ್ಲಜನಕ ಉತ್ಪಾದನೆಗೆ ಅನುಮತಿ ನೀಡಿತ್ತು. ಹೀಗಾಗಿ 2018ರಿಂದ ಮುಚ್ಚಲಾಗಿದ್ದ ಕಾರ್ಖಾನೆಯನ್ನು ಪುನರಾರಂಭಿಸಲಾಗಿತ್ತು. ಇದೀಗ ಘಟಕದಲ್ಲಿ ಆಮ್ಲಜನಕ ಉತ್ಪಾದನೆಯಷ್ಟೇ  ಅಲ್ಲದೇ ಸರಬರಾಜು ಕೂಡ ಆರಂಭವಾಗಿದೆ. ಆರಂಭದಲ್ಲಿ ಪ್ರತಿ ದಿನ ಎರಡು ಟ್ಯಾಂಕರ್‌ಗಳು ಆಮ್ಲಜನಕ ಹೊತ್ತು ಇಲ್ಲಿಂದ ಸಾಗಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಸ್ಟೆರ್ಲೈಟ್‌ ಕಾರ್ಖಾನೆಯ ಬಗ್ಗೆ ಸುಪ್ರೀಂ ಕೋರ್ಟ್‌ ಪ್ರಸ್ತಾಪ ಮಾಡಿತ್ತು. ಆಮ್ಲಜನಕ ಇಲ್ಲದೆ ಜನರು ಸಾಯುತ್ತಿರುವಾಗ ತಮಿಳುನಾಡು ಸರ್ಕಾರ ಏಕೆ ಸ್ಟೆರ್ಲೈಟ್‌ ಕಾರ್ಖಾನೆಯನ್ನು ಆಮ್ಲಜನಕ ಉತ್ಪಾದನೆಗೆ ಬಳಸಬಾರದು ಎಂದು ಅದು ಕೇಳಿತ್ತು. ಆ ಬಳಿಕವಷ್ಟೇ ತಮಿಳುನಾಡು ಸರ್ಕಾರ ಸರ್ವ ಪಕ್ಷ ಸಭೆ  ಕರೆದು ಅಲ್ಲಿ ಆಮ್ಲಜನಕ ಉತ್ಪಾದನೆಗೆ ಅವಕಾಶ ಕಲ್ಪಿಸಿದೆ.‌‌ ತಮಿಳುನಾಡು ರಾಜ್ಯದ ಬೇಡಿಕೆ ಈಡೇರುವ ತನಕ ಸ್ಟೆರ್ಲೈಟ್‌ನಲ್ಲಿ ಉತ್ಪಾದಿಸಲಾದ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಬೇಕು, ಬಳಿಕಷ್ಟೇ ಹೊರ ರಾಜ್ಯಗಳಿಗೆ ಕಳುಹಿಸಬಹುದು ಎಂದು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಹೀಗಾಗಿ ಸದ್ಯ  ಉತ್ಪಾದನೆಯಾಗುವ ಸ್ಟೆರ್ಲೈಟ್‌ ಆಮ್ಲಜನಕ ತಮಿಳುನಾಡಿಗಷ್ಟೇ ಪೂರೈಕೆಯಾಗಲಿದೆ ಎಂದು ಹೇಳಲಾಗಿದೆ.

ಈ ಕುರಿತು ಮಾತನಾಡಿದ ಸ್ಟೆರ್ಲೈಟ್ ಕಾಪರ್ ಸಂಸ್ಥೆಯ ಸಿಇಒ ಪಂಕಜ್ ಕುಮಾರ್ ಅವರು, ಈ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಜೀವ ಉಳಿಸುವ ಕಾರ್ಯಕ್ಕೆ ನಮ್ಮ ಸಂಸ್ಥೆ ಬಳಕೆಯಾಗುತ್ತಿರುವುದಕ್ಕೆ ತುಂಬಾ ಹೆಮ್ಮೆ ಇದೆ. ಈ ಸಾಂಕ್ರಾಮಿಕ ಬಿಕ್ಕಟ್ಟು ತಗ್ಗುವವರೆಗೂ ನಮ್ಮ ಘಟಕದಲ್ಲಿ ನಿರಂತರವಾಗಿ  ಆಮ್ಲಜನಕ ಉತ್ಪಾದನೆಯಾಗಲಿದೆ. ಆಮ್ಲಜನಕ ಉತ್ಪಾದನೆಗಾಗಿ ನಮ್ಮಿಂದಾಗುವ ಸಕಲ ಪ್ರಯತ್ನಗಳನ್ನೂ ಮುಂದುವರೆಸುತ್ತೇವೆ ಎಂದು ನಮ್ಮ ತಂಡದ ವತಿಯಿಂದ ನಾನು ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ. ಅಂತೆಯೇ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಒಗ್ಗಟ್ಟಿನ ಪ್ರಯತ್ನದ ಭಾಗವಾಗಿ ಇದು  ನಮಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ. ಘಟಕದಲ್ಲಿ ಆಮ್ಲ ಜನಕ ತಯಾರಿಸುವ ಸಂಬಂಧ ಅಗತ್ಯವಾದ ಅನುಮೋದನೆಗಳನ್ನು ತ್ವರಿತ ರೀತಿಯಲ್ಲಿ ಒದಗಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದಕ್ಕಾಗಿ ವಿಶೇಷವಾಗಿ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ನಮ್ಮ ಪೂರೈಕೆದಾರರು ಮತ್ತು ಪಾಲುದಾರರ ಸಹಯೋಗದ  ಪ್ರಯತ್ನಗಳ ಮೂಲಕ ಸ್ಟೆರ್ಲೈಟ್ ಕಾಪರ್ ಸಂಸ್ಥೆಯ ಆಮ್ಲಜನಕ ಸ್ಥಾವರವನ್ನು ಶೀಘ್ರವಾಗಿ ಪುನಃ ಸಕ್ರಿಯಗೊಳಿಸಲು ಸಾಧ್ಯವಾಯಿತು. ನಮ್ಮ ಉದ್ಯೋಗಿಗಳು ಮತ್ತು ಸಮುದಾಯದಿಂದ ಪಡೆದ ಬೆಂಬಲವು ಸ್ಥಾವರವನ್ನು ತ್ವರಿತ ಉತ್ಪಾದನೆಗೆ ಸಿದ್ಧಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com