ದಿನವೊಂದಕ್ಕೆ 6 ಪಟ್ಟು ಹೆಚ್ಚು ಉತ್ಪಾದನೆಯಾದರಷ್ಟೇ ಕೇಂದ್ರದ 2 ಬಿಲಿಯನ್ ಲಸಿಕೆ ಕನಸು ನನಸಾಗಲು ಸಾಧ್ಯ: ತಜ್ಞರು

ಕೋವಿಡ್-19 ಲಸಿಕೆಗೆ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿರುವುದರ ನಡುವೆ ಕೇಂದ್ರ ಸರ್ಕಾರ ಆಗಸ್ಟ್-ಡಿಸೆಂಬರ್ ನಡುವೆ 2 ಬಿಲಿಯನ್ ಡೋಸ್ ಗಳಷ್ಟು ಲಸಿಕೆಯನ್ನು ಉತ್ಪಾದನೆ ಮಾಡುವುದಾಗಿ ಭರವಸೆ ನೀಡಿತ್ತು. 
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ನವದೆಹಲಿ: ಕೋವಿಡ್-19 ಲಸಿಕೆಗೆ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿರುವುದರ ನಡುವೆ ಕೇಂದ್ರ ಸರ್ಕಾರ ಆಗಸ್ಟ್-ಡಿಸೆಂಬರ್ ನಡುವೆ 2 ಬಿಲಿಯನ್ ಡೋಸ್ ಗಳಷ್ಟು ಲಸಿಕೆಯನ್ನು ಉತ್ಪಾದನೆ ಮಾಡುವುದಾಗಿ ಭರವಸೆ ನೀಡಿತ್ತು. 

ಈ ಬಗ್ಗೆ ಈಗ ತಜ್ಞರು ಹುಬ್ಬೇರಿಸಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರದ 2 ಬಿಲಿಯನ್ ಲಸಿಕೆ ಕನಸು ನನಸಾಗಬೇಕೆಂದರೆ ಈಗಿಗಿಂತಲೂ ದಿನವೊಂದಕ್ಕೆ 6 ಪಟ್ಟು ಹೆಚ್ಚು ಉತ್ಪಾದನೆಯಾದರಷ್ಟೇ ಸಾಧ್ಯ ಎಂದು ಹೇಳಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಬಹುತೇಕ ಸಿನಿಕತನ ಅಥವಾ ಅಸಾಧ್ಯವಲ್ಲದೇ ಇದ್ದರೂ  ಪ್ರಾಯೋಗಿಕವಲ್ಲದ್ದು ಎಂದು ತಜ್ಞರು ಎಚ್ಚರಿಸಿದ್ದಾರೆ. 

ದೇಶದಲ್ಲಿ ಈಗ ದಿನವೊಂದಕ್ಕೆ 2.3 ಮಿಲಿಯನ್ ಡೋಸ್ ಗಳಷ್ಟು ಲಸಿಕೆ ಉತ್ಪಾದನೆಯಾಗುತ್ತಿದೆ. ಆದರೆ ಸರ್ಕಾರ ತನ್ನ ಮುಂದಿನ ಯೋಜನೆಯಲ್ಲಿ ಪ್ರಕಟಿಸಿರುವ ಅಂಕಿ-ಸಂಖ್ಯೆಗಳ ಗುರಿ ತಲುಪಬೇಕಾದರೆ ಆಗಸ್ಟ್-ಡಿಸೆಂಬರ್ ತಿಂಗಳಲ್ಲಿ ಈಗಿನ ಉತ್ಪಾದನೆಗೆ ಹೋಲಿಕೆ ಮಾಡಿದಲ್ಲಿ 6 ಪಟ್ಟು ಹೆಚ್ಚು ಲಸಿಕೆಯನ್ನು ಉತ್ಪಾದನೆ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಆಗಸ್ಟ್-ಡಿಸೆಂಬರ್ ತಿಂಗಳಲ್ಲಿ ಭಾರತದ ಎಲ್ಲಾ ವಯಸ್ಕ ಪ್ರಜೆಗಳಿಗೂ ಸಾಕಾಗುವಷ್ಟು ಅಂದರೆ 2.16 ಬಿಲಿಯನ್ ಡೋಸ್ ಗಳಷ್ಟು ಲಸಿಕೆ ಉತ್ಪಾದನೆ ಮಾಡಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ ಪೌಲ್ ಮೇ.14 ರಂದು ಮಾಹಿತಿ ನೀಡಿದ್ದರು. 

ಜುಲೈ ನಲ್ಲಿ ಪ್ರಾರಂಭಗೊಂಡು, 75 ಕೋಟಿ ಡೋಸ್ ಗಳಷ್ಟು ಕೋವಿಶೀಲ್ಡ್, 55 ಕೋಟಿ ಡೋಸ್ ಗಳಷ್ಟು ಕೋವ್ಯಾಕ್ಸಿನ್ 15.6 ಕೋಟಿ ಡೋಸ್ ಗಳಷ್ಟು ಸ್ಪುಟ್ನಿಕ್ V ಲಸಿಕೆಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. 

"ಲಸಿಕೆ ಉತ್ಪಾದನೆಯನ್ನು ವರ್ಷಗಳ ಕಾಲ ಗಮನಿಸುತ್ತಿರುವ ತಜ್ಞರು ಕೇಂದ್ರ ಸರ್ಕಾರದ 2.16 ಬಿಲಿಯನ್ ಲಸಿಕೆ ಉತ್ಪಾದನೆಯ ಗುರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇಷ್ಟು ಕಡಿಮೆ ಸಮಯದಲ್ಲಿ ಅಷ್ಟೊಂದು ಬೃಹತ್ ಪ್ರಮಾಣದ ಲಸಿಕೆ ಉತ್ಪಾದನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದನ್ನು ಸಾಧಿಸಿದರೆ ನಿಜವಾಗಿಯೂ ಸಂತಸವಾಗುತ್ತದೆ. ಆದರೆ ಅದು ಹೇಗೆ ಸಾಧ್ಯ ಎನ್ನುವುದೇ ಪ್ರಶ್ನೆ ಎಂದು ಇಮ್ಯುನೋಲಜಿಸ್ಟ್ ಸುಧಾಂಶು ವ್ರತಿ ಪ್ರಶ್ನಿಸಿದ್ದಾರೆ. 

ಟಾಟಾ ಇನ್ಸ್ಟಿಟ್ಯೂಟ್ ನ ಸಾಮಾಜಿಕ ವಿಜ್ಞಾನ ವಿಭಾಗದಲ್ಲಿರುವ ಅರ್ಥಶಾಸ್ತ್ರಜ್ಞ ಆರ್ ರಾಮ್ ಕುಮಾರ್ ಸಹ ಇದೇ ಮಾದರಿಯ ಪ್ರಶ್ನೆಯನ್ನು ಮುಂದಿಟ್ಟಿದ್ದು, ಪ್ರಕ್ಷೇಪಗಳ ಪ್ರಕಾರ ಸೆರಮ್ ಇನ್ಸ್ಟಿಟ್ಯೂಟ್ ಈಗಿನದ್ದಕ್ಕಿಂತಲೂ ದಿನವೊಂದಕ್ಕೆ 3 ಪಟ್ಟು ಲಸಿಕೆ ಉತ್ಪಾದನೆ ಹೆಚ್ಚಿಸಬೇಕು, ಆದರೆ ಜುಲೈ ವೇಳೆಗೆ ದಿನವೊಂದಕ್ಕೆ 3.3 ಮಿಲಿಯನ್ ಡೋಸ್ ಗಳನ್ನು ಉತ್ಪಾದಿಸುವುದಕ್ಕೇ ಎಸ್ಐಐ ಹೆಣಗಾಡುತ್ತಿದೆ. ಇನ್ನು ದಿನವೊಂದಕ್ಕೆ 6.4 ಮಿಲಿಯನ್ ಡೋಸ್ ಗಳನ್ನು ಡಿಸೆಂಬರ್ ವೇಳೆಗೆ ಉತ್ಪಾದಿಸಲು ಹೇಗೆ ಸಾಧ್ಯ? ಎಂದು ತಜ್ಞರು ಪ್ರಶ್ನಿಸಿದ್ದಾರೆ. ಇನ್ನು 5 ತಿಂಗಳಲ್ಲಿ 55 ಕೋಟಿ ಡೋಸ್ ಗಳಷ್ಟು ಕೋವ್ಯಾಕ್ಸಿನ್ ನ್ನು ಉತ್ಪಾದಿಸಲು ಸಂಸ್ಥೆ ದಿನವೊಂದಕ್ಕೆ 3.7 ಮಿಲಿಯನ್ ಡೋಸ್ ಗಳಷ್ಟು ಲಸಿಕೆಯನ್ನು ಉತ್ಪಾದಿಸಬೇಕಾಗುತ್ತದೆ. 

ಲಸಿಕೆ ಉತ್ಪಾದನೆಗೆ ಸರ್ಕಾರ ಆಯ್ಕೆ ಮಾಡಿಕೊಂಡಿರುವ ಬೇರೆ ಸಂಸ್ಥೆಗಳು ಉತ್ಪಾದನೆಯನ್ನು 8-12 ತಿಂಗಳ ಒಳಗೆ ಪ್ರಾರಂಭಿಸುವುದಕ್ಕೆ ಸಾಧ್ಯವಿಲ್ಲ.  ಬಿಐಬಿಸಿಒಎಲ್ ಸಂಸ್ಥೆಗೆ ಲಸಿಕೆ ಉತ್ಪಾದನೆಯಲ್ಲಿ ಅನುಭವವೇ ಇಲ್ಲ. ಲಸಿಕೆಯನ್ನು ಮಾರಾಟ ಮಾಡುವುದಕ್ಕೂ ಮುನ್ನ 6 ತಿಂಗಳಲ್ಲ 36 ತಿಂಗಳು ಉತ್ಪಾದನೆ ಮಾಡುವುದಕ್ಕೇ ಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮರೋಪಾದಿಯಲ್ಲಿ ಕೆಲಸ ಮಾಡತೊಡಗಿದರೂ ಸಹ ಕೋವ್ಯಾಕ್ಸಿನ್ ನ್ನು ಉತ್ಪಾದಿಸುವುದಕ್ಕಾಗಿ ಬೇಕಾಗಿರುವ ಬಯೋಸೇಫ್ಟಿ ಲೆವೆಲ್ 3 ಪ್ರಯೋಗಾಲಯಗಳು ಈ ಸಂಸ್ಥೆಗಳಲ್ಲಿ ಸ್ಥಾಪನೆಯಾಗಿ, ಈ ಸಂಸ್ಥೆಗಳ ಘಟಕಗಳಿಂದ ಲಸಿಕೆ ಹೊರಬರುವುದಕ್ಕೆ ಕನಿಷ್ಟ 6 ತಿಂಗಳುಗಳು ಬೇಕಾಗುತ್ತದೆ" ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com