ಪ್ರಧಾನಿಯಿಂದ ಕೋವಿಡ್-19 ಪರಿಸ್ಥಿತಿ ಪರಾಮರ್ಶೆ: ವೆಂಟಿಲೇಟರ್ ಗಳ ಅಳವಡಿಕೆ, ಕಾರ್ಯಾಚರಣೆ ಕುರಿತು ಆಡಿಟ್ ಗೆ ಆದೇಶ!

ಗ್ರಾಮೀಣ ಪ್ರದೇಶದಲ್ಲಿ ಮನೆ ಬಾಗಿಲಿಗೆ ಕೋವಿಡ್-19 ಪರೀಕ್ಷೆ, ಕಣ್ಗಾವಲಿನ ಕಡೆಗೆ ಗಮನ ಹರಿಸಿ ಆರೋಗ್ಯ ಸಂಪನ್ಮೂಲಗಳನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಗ್ರಾಮೀಣ ಪ್ರದೇಶದಲ್ಲಿ ಮನೆ ಬಾಗಿಲಿಗೆ ಕೋವಿಡ್-19 ಪರೀಕ್ಷೆ, ಕಣ್ಗಾವಲಿನ ಕಡೆಗೆ ಗಮನ ಹರಿಸಿ ಆರೋಗ್ಯ ಸಂಪನ್ಮೂಲಗಳನ್ನು ಹೆಚ್ಚಿಸಬೇಕು ಎಂದು ಶನಿವಾರ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚಿನ ಪಾಸಿಟಿವಿಟಿ ದರ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಸ್ವಲ್ಪ ಅವಧಿಯ ಸ್ಥಳೀಯ ಕಂಟೈನ್ ಮೆಂಟ್ ಕಾರ್ಯತಂತ್ರದ ಅಗತ್ಯವಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಯತ್ನಗಳಿಗೆ ಪ್ರತಿಕೂಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ಬಂದರೂ ಯಾವುದೇ  ಒತ್ತಡಕ್ಕೊಳಗಾಗದೆ  ಕೋವಿಡ್-19 ಸಂಖ್ಯೆಗಳ ಪಾರದರ್ಶಕ ವರದಿಯನ್ನು ರಾಜ್ಯಗಳು ಪ್ರೋತ್ಸಾಹಿಸಬೇಕು  ಎಂದು ಹೇಳಿದರು. ಕೋವಿಡ್-19 ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯನ್ನು ಅನೇಕ ರಾಜ್ಯಗಳು ಮರೆ ಮಾಚುತ್ತಿವೆ ಎಂಬ ವರದಿಗಳ ಬೆನ್ನಲ್ಲೇ ಪ್ರಧಾನಿ ಈ ರೀತಿಯ ಹೇಳಿಕೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಆಮ್ಲಜನಕ ಪೂರೈಕೆಯನ್ನು ಖಾತ್ರಿಗೊಳಿಸುವ ವಿತರಣಾ ಯೋಜನೆಯನ್ನು ರೂಪಿಸಬೇಕು ಎಂದು ಮೋದಿ ನಿರ್ದೇಶಿಸಿದರು. ಆಮ್ಲಜನಕ ಸಾಂದ್ರಕಗಳಂತಹ ವೈದ್ಯಕೀಯ ಸಲಕರಣೆಗಳ ಕಾರ್ಯಾಚರಣೆಯಲ್ಲಿ  ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಅವರು ಹೇಳಿದರು. ಅಂತಹ ವೈದ್ಯಕೀಯ ಸಾಧನಗಳ ಸುಗಮ ಕಾರ್ಯಾಚರಣೆಗೆ  ವಿದ್ಯುತ್ ಸರಬರಾಜನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಪಿಎಂಒ ಕಚೇರಿ ಹೇಳಿದೆ.

ಕೋವಿಡ್-19 ಮೊದಲ ಅಲೆಯಲ್ಲಿ ಗ್ರಾಮೀಣ ಪ್ರದೇಶಗಳು ಹೆಚ್ಚಿನ ಭಾದಿತವಾಗಿರಲಿಲ್ಲ. ಆದರೆ, ಎರಡನೇ ಅಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶಗಳೂ ಗಂಭೀರ ಪರಿಣಾಮ ಎದುರಿಸುತ್ತಿವೆ. ಎಲ್ಲಾ ಅಗತ್ಯ ಸಲಕರಣೆಗಳೊಂದಿಗೆ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರನ್ನು ಬಲಪಡಿಸಬೇಕು ಎಂದು ಪ್ರಧಾನಿ ಮೋದಿ ಕೋರಿದ್ದಾರೆ.

ಹೆಚ್ಚಿನ ಪಾಸಿಟಿವಿಟಿ ದರಗಳು ಇರುವ ಪ್ರದೇಶಗಳಲ್ಲಿ ಆರ್ ಟಿ- ಪಿಸಿಆರ್, ರಾಪಿಡ್ ಟೆಸ್ಟ್ ಗಳನ್ನು ಹೆಚ್ಚಿಸಬೇಕು ಎಂದು ಮೋದಿ ಹೇಳಿದರು.ಮಾರ್ಚ್ ಆರಂಭದಲ್ಲಿ ವಾರಕ್ಕೆ ಸುಮಾರು 50 ಲಕ್ಷ ಪರೀಕ್ಷೆಗಳನ್ನು ಮಾಡಲಾಗುತಿತ್ತು. ಅದು ಈಗ ವಾರಕ್ಕೆ ಸುಮಾರು 1.3 ಕೋಟಿಗೆ ಹೆಚ್ಚಳವಾಗಿದೆ ಎಂದು ಪಿಎಂಒ ಕಚೇರಿ ತಿಳಿಸಿದೆ.

 ಪಾಸಿಟಿವಿಟಿ ದರ ಕ್ರಮೇಣ ಕಡಿಮೆಯಾಗುತ್ತಿದ್ದು, ಚೇತರಿಕೆ ದರ ಹೆಚ್ಚುತ್ತಿರುವ ಬಗ್ಗೆ ಮೋದಿ ವಿವರಿಸಿದ್ದಾರೆ. ಹಿಂದೆ ಪ್ರತಿದಿನ ಸುಮಾರು 4 ಲಕ್ಷ ಪ್ರಕರಣಗಳು ಕಂಡುಬರುತಿತ್ತು. ಆದರೆ, ಇದೀಗ  ಕೇಂದ್ರ, ರಾಜ್ಯ ಸರ್ಕಾರ ಹಾಗೂ ಆರೋಗ್ಯ ಕಾರ್ಯಕರ್ತರ ಪ್ರಯತ್ನದಿಂದಾಗಿ  ಕೇಸ್ ಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. 

ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಕೋವಿಡ್-19 ಪರೀಕ್ಷೆ, ಆಕ್ಸಿಜನ್ ಲಭ್ಯತೆ ಮತ್ತು ಆರೋಗ್ಯ ಮೂಲಸೌಕರ್ಯ, ಲಸಿಕೆ ಅಭಿಯಾನ ಕುರಿತಂತೆ ಅಧಿಕಾರಿಗಳು ಸಮಗ್ರ ವಿವರವನ್ನು ಒದಗಿಸಿದರು. ಕೆಲ ರಾಜ್ಯಗಳಲ್ಲಿ ಬಳಕೆಯಾಗದೆ ಬಿದ್ದಿರುವ ವೆಂಟಿಲೇಟರ್ ಗಳ ಬಗ್ಗೆ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಕೇಂದ್ರ ಸರ್ಕಾರದಿಂದ ಒದಗಿಸಿದ ವೆಂಟಿಲೇಟರ್ ಗಳ ಅಳವಡಿಕೆ ಮತ್ತು ಕಾರ್ಯಾಚರಣೆ ಬಗ್ಗೆ ಕೂಡಲೇ ಆಡಿಟ್ ನಡೆಸುವಂತೆ ನಿರ್ದೇಶಿಸಿದರು. ಅಗತ್ಯಬಿದ್ದರೆ ಸಮರ್ಪಕವಾಗಿ ವೆಂಟಿಲೇಟರ್ ಆಪರೇಟ್ ಗಾಗಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವಂತೆ ಸೂಚಿಸಿದರು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com