ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಹೆಚ್ಚಳ: ಸಮುದಾಯ ಆಧಾರಿತ, ಪ್ರಾಥಮಿಕ ಆರೋಗ್ಯ ಸೇವೆ ವಿಸ್ತರಣೆಗೆ ಕೇಂದ್ರ ಸೂಚನೆ
ಕೋವಿಡ್ ಎರಡನೇ ಅಲೆ ಗ್ರಾಮಾಂತರ, ಪಟ್ಟಣ, ಅರೆ ನಗರ ಪ್ರದೇಶಗಳಲ್ಲಿ ಸಹ ನಿಧಾನವಾಗಿ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮುದಾಯ ಆಧಾರಿತ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೇವೆಯನ್ನು ಸರಿಯಾಗಿ ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.
Published: 17th May 2021 07:58 AM | Last Updated: 17th May 2021 12:55 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್ ಎರಡನೇ ಅಲೆ ಗ್ರಾಮಾಂತರ, ಪಟ್ಟಣ, ಅರೆ ನಗರ ಪ್ರದೇಶಗಳಲ್ಲಿ ಸಹ ನಿಧಾನವಾಗಿ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮುದಾಯ ಆಧಾರಿತ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೇವೆಯನ್ನು ಸರಿಯಾಗಿ ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.
ಕಂಟೈನ್ ಮೆಂಟ್, ವಿಚಕ್ಷಣಾ ವಲಯಗಳಲ್ಲಿ ತಳ ಮಟ್ಟದ ಕೆಲಸಗಾರರನ್ನು ಚುರುಕುಗೊಳಿಸುವಂತೆ ಮತ್ತು ತಪಾಸಣೆಗೆ ಆರ್ ಎಟಿ, ಟೆಲಿ ಸಮಾಲೋಚನೆ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ರ್ಯಾಪಿಡ್ ಆಂಟಿಜೆನ್ ಟೆಸ್ಟ್(ಆರ್ ಎಟಿ)ಗೆ ತಳ ಮಟ್ಟದ ಸಿಬ್ಬಂದಿಯನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಲು ಅವರಿಗೆ ತರಬೇತಿ ನೀಡುವಂತೆ ಸೂಚಿಸಲಾಗಿದೆ. ಸೋಂಕಿತರಿಗೆ ತಪಾಸಣೆ ಮಾಡಲು ಮತ್ತು ಅವರಿಗೆ ಸರಿಯಾದ ಸಮಯಕ್ಕೆ ಐಸೊಲೇಷನ್ ನಲ್ಲಿರುವಂತೆ ಸೂಚಿಸಲು, ಸರಿಯಾದ ಚಿಕಿತ್ಸೆ ನೀಡಲು ತಳ ಮಟ್ಟದ ಸಿಬ್ಬಂದಿ ಉತ್ತಮ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ನಿನ್ನೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರೊಂದಿಗೆ, ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ ಕೆ ಪೌಲ್ ಅವರೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು.
ಸಭೆಯಲ್ಲಿ ಅರೆ ನಗರ, ಗ್ರಾಮಾಂತರ, ಪಟ್ಟಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೋವಿಡ್-19 ಕಂಟೈನ್ ಮೆಂಟ್ ಪ್ರದೇಶಗಳು, ಅವುಗಳ ನಿರ್ವಹಣೆ ಮೇಲೆ ಗಮನ ಹರಿಸಲಾಯಿತು. ಕೋವಿಡ್-19ನ ಪರಿಣಾಮಕಾರಿ ಪ್ರಾಯೋಗಿಕ ನಿರ್ವಹಣೆ, ಬ್ಲ್ಯಾಕ್ ಫಂಗಸ್ ರಾಜ್ಯಗಳಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಅವುಗಳ ಮೇಲೆ ಗಮನ ಹರಿಸುವ ಕುರಿತು ಚರ್ಚಿಸಲಾಯಿತು ಎಂದು ಸಚಿವಾಲಯ ಹೇಳಿದೆ.
ಕೊರೋನಾ ಎರಡನೇ ಅಲೆ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿದ್ದು ಅಲ್ಲಿ ಕೊರೋನಾ ಪಾಸಿಟಿವ್ ದರ ಮತ್ತು ಸಾಯುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಕೊರೋನಾ ಪರೀಕ್ಷೆ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಆರೋಪ ಕೇಳಿಬರುತ್ತಿರುವ ಸಂದರ್ಭದಲ್ಲಿ ನಿನ್ನೆ ನಡೆದ ಸಭೆ ಮಹತ್ವ ಪಡೆದಿದೆ.