ಕೇಂದ್ರದ ಕೋವಿಡ್-19 ಜಿನೋಮ್ ಅಧ್ಯಯನ ಯೋಜನೆಯ ಸಲಹೆಗಾರ ಹುದ್ದೆಗೆ ಹಿರಿಯ ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್ ರಾಜೀನಾಮೆ!

ಸೂಕ್ಷ್ಮರೋಗಾಣು ಅಥವಾ ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್, ಕೇಂದ್ರ ಸರ್ಕಾರದ ಕೋವಿಡ್-19 ಜಿನೋಮ್ ಅಧ್ಯಯನ ಅಥವಾ ಅದರ ಕುರಿತು ನಿಗಾ ವಹಿಸುವ ಯೋಜನೆಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್
ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್

ನವದೆಹಲಿ: ಸೂಕ್ಷ್ಮರೋಗಾಣು ಅಥವಾ ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್, ಕೇಂದ್ರ ಸರ್ಕಾರದ ಕೋವಿಡ್-19 ಜಿನೋಮ್ ಅಧ್ಯಯನ ಅಥವಾ ಅದರ ಕುರಿತು ನಿಗಾ ವಹಿಸುವ ಯೋಜನೆಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್-19 ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿರುವುದು ಕೇಂದ್ರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಕೋವಿಡ್-19 ವೈರಾಣುಗಳ ವಂಶವಾಹಿ ಹಾಗೂ ರೂಪಾಂತರಗಳನ್ನು ಅಧ್ಯಯನ ಮಾಡುವ ಸಂಬಂಧ ಕಳೆದ ವರ್ಷ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ಇಂಡಿಯನ್ SARS-CoV-2 ಜಿನೋಮಿಕ್ಸ್ ಒಕ್ಕೂಟ (INSACOG)ವನ್ನು ರಚಿಸಿತ್ತು. 

ಅಶೋಕಾ ವಿಶ್ವವಿದ್ಯಾನಿಲಯದಲ್ಲಿ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸಸ್ ನ ನಿರ್ದೇಶಕರೂ ಆಗಿರುವ ಜಮೀಲ್ ಸಲಹೆಗಾರರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಕೇಂದ್ರದ ಕೋವಿಡ್-19 ನೀತಿಗಳನ್ನು ಅವರು ತೀವ್ರವಾಗಿ ಟೀಕಿಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. 

ನ್ಯೂಯಾರ್ಕ್ ಟೈಮ್ಸ್ ನಲ್ಲಿ ಇತ್ತೀಚೆಗಷ್ಟೇ ಲೇಖನ ಬರೆದಿದ್ದ ಅವರು, ಪುರಾವೆ ಆಧಾರಿತ ನೀತಿ ತಯಾರಿಕೆಗೆ ಭಾರತದಲ್ಲಿನ ವಿಜ್ಞಾನಿಗಳು ಮೊಂಡುತನದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದ್ದರು. 

ಹೆಪಿಟೈಟಿಸ್ ಇ ವೈರಾಣುವಿನ ತಮ್ಮ ಅಧ್ಯಯನಕ್ಕೆ ಖ್ಯಾತಿ ಪಡೆದಿರುವ ಜಮೀಲ್, ತಾವು ರಾಜೀನಾಮೆ ನೀಡುತ್ತಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸ್ಪಷ್ಟಪಡಿಸಿದ್ದಾರೆ, ಆದರೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ನಿರಾಕರಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com