ಗೋವು ಕಳ್ಳಸಾಗಣೆದಾರರಿಂದ ಬಾಂಗ್ಲಾ ಗಡಿಯಲ್ಲಿ ಗುಂಡಿನ ದಾಳಿ: ಬಿಎಸ್ ಎಫ್ ಸೈನಿಕನಿಗೆ ಗಾಯ

ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿಯಾಚೆಗಿನ ಜಾನುವಾರು ಕಳ್ಳಸಾಗಣೆದಾರರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್ಎಫ್ ಯೋಧನಿಗೆ ಗುಂಡೇಟು ತಗುಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲ್ಕತಾ: ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿಯಾಚೆಗಿನ ಜಾನುವಾರು ಕಳ್ಳಸಾಗಣೆದಾರರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್ಎಫ್ ಯೋಧನಿಗೆ ಗುಂಡೇಟು ತಗುಲಿದೆ. 

ಈ ಬಗ್ಗೆ ಬಿಎಸ್ ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೂಚ್ ಬೆಹಾರ್ ಜಿಲ್ಲೆಯ ಗಡಿ ಭದ್ರತಾ ಪಡೆಯ ಪುಟಿಯಾ ಬರೋಮಾಸಿಯಾ ಗಡಿ ಪೋಸ್ಟ್ ಬಳಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಸುಮಾರು 6 ರಿಂದ 7 ದನಗಳನ್ನು ಬಾಂಗ್ಲಾದೇಶ  ಗಡಿಯತ್ತ ಕೊಂಡೊಯ್ಯುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಅಂತೆಯೇ ನಿನ್ನೆ ಬಾಂಗ್ಲಾದೇಶದ ದುಷ್ಕರ್ಮಿಗಳು ಸುಮಾರು 10-15 ಜಾನುವಾರುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಿರುವ ಶಂಕೆ ಇದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಕ್ತಾರರು ತಿಳಿಸಿದ್ದಾರೆ.

"ಬಿಎಸ್ಎಫ್ ಸೈನಿಕರು ಸ್ಥಳಕ್ಕೆ ಧಾವಿಸಿ ಅವರನ್ನು ನಿಲ್ಲುವಂತೆ ಎಚ್ಚರಿಕೆ ನೀಡಿದರು. ಆದರೆ ಇದಕ್ಕೆ ಬಗ್ಗದ ಕಳ್ಳ ಸಾಗಣೆದಾರರು ಸೈನಿಕರತ್ತ ಗುಂಡಿನ ದಾಳಿ ನಡೆಸಿ, ಗ್ರೆನೇಡ್ ಎಸೆದಿದ್ದಾರೆ. ಬಿಎಸ್ಎಫ್ ಸಿಬ್ಬಂದಿಗಳತ್ತ 4ರಿಂದ 5 ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಓರ್ವ ಸೈನಿಕನ ಕಾಲಿಗೆ ಗುಂಡೇಟು  ತಗುಲಿದ್ದು, ಸೈನಿಕರೂ ಕೂಡ ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಕಳ್ಳಸಾಗಣೆದಾರರು ಓಡಿ ಹೋಗಿದ್ದಾರೆ ಎಂದು ಅವರು ಹೇಳಿದರು.

ಪ್ರಸ್ತತ ಗುಂಡೇಟು ತಗುಲಿರುವ ಸೈನಿಕನನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com