ಕೋವಿಡ್-19 ಪ್ರಭಾವದಿಂದ ತತ್ತರಿಸಿರುವ ಮಧ್ಯಮ ವರ್ಗಕ್ಕೆ ಪರಿಹಾರ ಕೋರಿ ಯುಪಿ ಮುಖ್ಯಮಂತ್ರಿಗೆ ಪ್ರಿಯಾಂಕಾ ಪತ್ರ!
ಖಾಸಗಿ ಆಸ್ಪತ್ರೆಗಳು ಜನರಿಂದ ದುಬಾರಿ ದರ ವಸೂಲಿ ಮಾಡದಂತೆ ಖಾತ್ರಿಗೊಳಿಸುವುದು, ಹಣದುಬ್ಬರ ನಿಯಂತ್ರಣ, ವ್ಯಾಪಾರಿಗಳಿಗೆ ಪರಿಹಾರದಂತಹ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅವರನ್ನು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.
Published: 20th May 2021 02:27 PM | Last Updated: 20th May 2021 02:32 PM | A+A A-

ಪ್ರಿಯಾಂಕಾ ಗಾಂಧಿ ವಾದ್ರಾ
ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಪ್ರಭಾವದಿಂದ ಮಧ್ಯಮ ವರ್ಗ ತತ್ತರಿಸುತ್ತಿದೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ, ಖಾಸಗಿ ಆಸ್ಪತ್ರೆಗಳು ಜನರಿಂದ ದುಬಾರಿ ದರ ವಸೂಲಿ ಮಾಡದಂತೆ ಖಾತ್ರಿಗೊಳಿಸುವುದು, ಹಣದುಬ್ಬರ ನಿಯಂತ್ರಣ, ವ್ಯಾಪಾರಿಗಳಿಗೆ ಪರಿಹಾರದಂತಹ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕಾ ಗಾಂಧಿ, ಕೋವಿಡ್-19 ಎರಡನೇ ಅಲೆ ಜನ ಸಮುದಾಯದ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದೆ. ಆಡಳಿತ ಕಡೆಯಿಂದ ಸಿದ್ಧತೆಯ ಕೊರತೆಯಿಂದಾಗಿ ಜನರು ಅಸಹನೀಯ ನೋವು ಅನುಭವಿಸುವಂತಾಗಿದೆ ಎಂದಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ಸರ್ಕಾರ ಯಾವುದೇ ಯೋಜನೆ ಮಾಡಿರಲಿಲ್ಲ ಎಂಬುದನ್ನು ಮೇಹೆಮ್ ಸ್ಪಷ್ಟಪಡಿಸಿದೆ. ಅನೇಕ ಅನಗತ್ಯ ನಿಯಮಗಳು ಜನರಿಗೆ ಅಪಾರ ಪ್ರಮಾಣದ ತೊಂದರೆಯನ್ನುಂಟು ಮಾಡಿದೆ ಎಂದು ಉತ್ತರ ಪ್ರದೇಶದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಮತ್ತೊಂದೆಡೆ ಸಾಂಕ್ರಾಮಿಕ ನಮ್ಮಿಂದ ಅನೇಕ ಜನರನ್ನು ಕಸಿದುಕೊಳ್ಳುತ್ತಿದ್ದು, ಜೀವನೋಪಾಯ, ಉದ್ಯೋಗ ಮತ್ತು ವ್ಯವಹಾರದಲ್ಲಿ ಅಪಾರ ಪ್ರಮಾಣದ ಸಂಕಷ್ಟಗಳನ್ನು ಸೃಷ್ಟಿಸಿದೆ. ಇಂದು ಕೋಟ್ಯಾಂತರ ಜನರು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಭಯಭೀತರಾಗಿದ್ದಾರೆ. ಅವರ ಆದಾಯ ಕ್ಷೀಣಿಸಿದೆ. ಹಣದುಬ್ಬರ ಅತಿ ವೇಗವಾಗಿ ಹೆಚ್ಚಳವಾಗುತ್ತಿದೆ. ಇದು ವಿಶೇಷವಾಗಿ ಮಧ್ಯಮ ವರ್ಗದ ಜನರನ್ನು ತೊಂದರೆಗೆ ಸಿಲುಕಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಕಷ್ಟದ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬದಲು, ಸರ್ಕಾರ ಕೆಲವು ಸಾರ್ವಜನಿಕ ಕಲ್ಯಾಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಮತ್ತು ಜನರಿಗೆ ಪರಿಹಾರ ಒದಗಿಸಬೇಕಾಗಿದೆ ಎಂದು ಹೇಳಿರುವ ಪ್ರಿಯಾಂಕಾ ಗಾಂಧಿ, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ಮಾಡದಂತೆ ಕ್ರಮ ಸೇರಿದಂತೆ ಮತ್ತಿತರ ಸಲಹೆಗಳನ್ನು ನೀಡಿದ್ದಾರೆ.