'ಕೃಷ್ಣಾಪಟ್ಟಣಂ ಔಷಧಿ'; 'ಕೋವಿಡ್-19 ಆಯುರ್ವೇದ ಔಷಧಿ' ನೀಡಿಕೆ ತಾತ್ಕಾಲಿಕ ಸ್ಥಗಿತ

ಆಂಧ್ರ ಪ್ರದೇಶದ ಕೃಷ್ಣಾ ಪಟ್ಟಣಂನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ 'ಕೃಷ್ಣಾಪಟ್ಟಣಂ ಔಷಧಿ ಕೋವಿಡ್-19 ಆಯುರ್ವೇದ ಔಷಧಿ' ನೀಡಿಕೆಗೆ ತಾತ್ಕಾಲಿಕ ತಡೆ ಹೇರಲಾಗಿದೆ.
ಆಯುರ್ವೇದ ಔಷಧಿಗಾಗಿ ಸರತಿ ಸಾಲು
ಆಯುರ್ವೇದ ಔಷಧಿಗಾಗಿ ಸರತಿ ಸಾಲು

ನೆಲ್ಲೂರು: ಆಂಧ್ರ ಪ್ರದೇಶದ ಕೃಷ್ಣಾ ಪಟ್ಟಣಂನಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ 'ಕೃಷ್ಣಾಪಟ್ಟಣಂ ಔಷಧಿ ಕೋವಿಡ್-19 ಆಯುರ್ವೇದ ಔಷಧಿ' ನೀಡಿಕೆಗೆ ತಾತ್ಕಾಲಿಕ ತಡೆ ಹೇರಲಾಗಿದೆ.

ಮಾರಕ ಕೊರೋನಾ ವೈರಸ್ ಸೋಂಕಿಗೆ ಆಯುರ್ವೇದ ವೈದ್ಯ ಆನಂದಯ್ಯ ಅವರು ನೀಡುತ್ತಿರುವ ಸಾಂಪ್ರಾದಾಯಿಕ ಆಯುರ್ವೇದ ಔಷಧಿಗೆ ಸಾವಿರಾರು ಜನರು ಮುಗಿಬಿದ್ದ ಹಿನ್ನಲೆಯಲ್ಲಿ ಇದು ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.  ಸುತ್ತಮುತ್ತಲ ಜಿಲ್ಲೆಗಳೂ ಸೇರಿದಂತೆ ಅನೇಕಾ ರಾಜ್ಯಗಳಿಂದ ಸೋಂಕಿತರ ಸಂಬಂಧಿಕರು ಔಷಧಿಗಾಗಿ ಇಲ್ಲಿಗೆ ಆಗಮಿಸುತ್ತಿದ್ದು, ಇದರಿಂದ ಈ ಗ್ರಾಮದಲ್ಲಿ ತೀವ್ರ ಜನದಟ್ಟಣೆ ಉಂಟಾಗಿತ್ತು. ಅಲ್ಲದೆ ಗ್ರಾಮದಲ್ಲಿ ಸೋಂಕಿನ ಭೀತಿ ಕೂಡ ಉಂಟಾಗಿತ್ತು. ಇದೀಗ ಇಲ್ಲಿ ಔಷಧಿ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಆನಂದಯ್ಯ ಅವರು ನೀಡುತ್ತಿರುವ ಆಯುರ್ವೇದ ಔಷಧಿಯ ವೈಜ್ಞಾನಿಕ ಪ್ರಾಮಾಣೀಕರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. 

ಆಯುಷ್ ಇಲಾಖೆಯಿಂದ ಔಷಧಿಯ ಪರೀಕ್ಷೆ
ಇನ್ನು ಆಯುರ್ವೇದ ವೈದ್ಯ ಆನಂದಯ್ಯ ಅವರ ಔಷಧಿಯನ್ನು ಇಂದು ಆಯುಷ್ ಇಲಾಖೆ ವೈದ್ಯರ ತಂಡ ಪರೀಕ್ಷೆಗೊಳಪಡಿಸಲಿದ್ದು, ಆಯುಷ್ ಆಯುಕ್ತ ಲೆಫ್ಟಿನೆಂಟ್ ಕರ್ನಲ್ ರಾಮು ಸೇರಿದಂತೆ ಹಲವಾರು ಆಯುಷ್ ವೈದ್ಯರ ತಂಡ ನಿನ್ನೆ ಸಂಜೆಯೇ  ಕೃಷ್ಣಪಟ್ಟಣಂ ತಲುಪಿದೆ. ಆಯುಷ್ ವೈದ್ಯರ ಸಮ್ಮುಖದಲ್ಲಿ ಆನಂದಯ್ಯ ಅವರು ಶನಿವಾರ ಬೆಳಿಗ್ಗೆ ಔಷಧಿ ತಯಾರಿಸುವ ಪ್ರಕ್ರಿಯೆಯನ್ನು ಪ್ರಸ್ತುತಪಡಿಸಿದರು. 

ಔಷಧಿಯಲ್ಲಿ ಹಾನಿಕಾರಕ ವಸ್ತುಗಳ ಬಳಕೆ ಇಲ್ಲ
ಇನ್ನು ಆಂಧ್ರ ಪ್ರದೇಶ ಆಯುಷ್ ಆಯೋಗವು ಆನಂದಯ್ಯ ಆಯುರ್ವೇದ ಔಷಧವನ್ನು ಪರಿಶೀಲಿಸಿದ್ದು, ಔಷಧಿಯಲ್ಲಿ ಹಾನಿಕಾರಕ ವಸ್ತುಗಳ ಬಳಕೆ ಮಾಡಿಲ್ಲ. ಪ್ರಮುಖವಾಗಿ ಸೋಂಕಿತರ ಕಣ್ಣಿಗೆ ಹಾಕುವ ದ್ರವ ಔಷಧದಲ್ಲಿ ಯಾವುದೇ ಹಾನಿಕಾರಕ ವಸ್ತುಗಳಿಲ್ಲ ಎಂದು ವೈದ್ಯರ ತಂಡ ಸ್ಪಷ್ಟಪಡಿಸಿದೆ ಎನ್ನಲಾಗಿದೆ. ಆದರೆ ಈ ಔಷಧ ಕೊರೋನಾ ಚಿಕಿತ್ಸೆಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಗೆ ಎಂಬುದರ ಕುರಿತು ಪರಿಶೀಲನೆ ನಡೆಸಬೇಕಿದೆ. ಇದಕ್ಕಾಗಿ ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆ (Central Ayurvedic Research Institute-CARI) ಒಂದು ತಂಡವನ್ನು ವಿಜಯವಾಡಕ್ಕೆ ಕಳುಹಿಸಲು ನಿರ್ಧರಿಸಿದ್ದು ಆನಂದಯ್ಯ ಅವರ ಔಷಧಿಯ ಪರೀಕ್ಷೆ ನಡೆಸಲಿದೆ ಎಂದು ಆರೋಗ್ಯ ವಿಭಾಗದ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಸಂಘಲ್ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com