ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ!
ಕೇರಳ ವಿಧಾನಸಭೆಗೆ ಆಯ್ಕೆಯಾದ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸೋಮವಾರ ನಡೆಯಿತು. ಈ ಸಂದರ್ಭದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ ಕೆ ಎಂ ಅಶ್ರಫ್ ಕನ್ನಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಕನ್ನಡತನ ಮೆರೆದಿದ್ದಾರೆ.
Published: 24th May 2021 01:54 PM | Last Updated: 24th May 2021 04:10 PM | A+A A-

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ ಕೆ ಎಂ ಅಶ್ರಫ್
ಮಂಜೇಶ್ವರ: ಕೇರಳ ವಿಧಾನಸಭೆಗೆ ಆಯ್ಕೆಯಾದ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸೋಮವಾರ ನಡೆಯಿತು. ಈ ಸಂದರ್ಭದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡತನ ಮೆರೆದಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹುಪಾಲು ಮಂದಿ ಕನ್ನಡಿಗರಿದ್ದಾರೆ. ಈ ಜಿಲ್ಲೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವುದರಿಂದ ಕನ್ನಡ ಭಾಷೆಯ ಪ್ರಭಾವ ಇಲ್ಲಿ ಹೆಚ್ಚು. ಭೌಗೋಳಿಕವಾಗಿ ಕೇರಳಕ್ಕೆ ಸೇರಿದ್ದರೂ ಕೂಡ ಇಲ್ಲಿನ ಜನರ ಕನ್ನಡ ಪ್ರೀತಿಗೇನು ಕೊರತೆಯಿಲ್ಲ. ಮಂಜೇಶ್ವರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರೇ ಇದ್ದು, ಕೇರಳ ರಾಜ್ಯ ಮಂಜೇಶ್ವರ ತಾಲ್ಲೂಕನ್ನು ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಎಂದು ಘೋಷಿಸಿದೆ.
ಇಲ್ಲಿನ ಶಾಸಕರು ಈ ಹಿಂದೆ ಕೂಡ ವಿಧಾನಸಭೆಯಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ಆ ಸಂಪ್ರದಾಯವನ್ನು ಅಶ್ರಫ್ ಮುಂದುವರಿಸಿದ್ದಾರೆ. ಇಂದು ಅಧಿವೇಶನ ಆರಂಭಕ್ಕೆ ಮುನ್ನ ಪ್ರಮಾಣ ವಚನ ಸ್ವೀಕಾರ ವೇಳೆ, ಎ ಕೆ ಎಂ ಅಶ್ರಫ್ ಅವರು ಅಚ್ಚ ಕನ್ನಡದಲ್ಲಿ ಅಲ್ಲಾಹು ಹೆಸರಿನಲ್ಲಿ ಪ್ರತಿಜ್ಞೆಗೈದು ಗಮನ ಸೆಳೆದರು.
ಅಶ್ರಫ್ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.