ಆಕಾಶದಲ್ಲಿ ವಿಮಾನದೊಳಗೆ ಭರ್ಜರಿಯಾಗಿ ಮದುವೆಯಾದ ಜೋಡಿ: ಕೋವಿಡ್ ನಿಯಮ ಉಲ್ಲಂಘಿಸಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿ!

ಮದುವೆ ಸ್ವರ್ಗದಲ್ಲಿ ನಡೆಯುತ್ತದೆ ಎನ್ನುತ್ತಾರೆ, ಆದರೆ ಇದು ನಡೆದಿದ್ದು ಆಕಾಶದಲ್ಲಿ ವಿಮಾನದ ಒಳಗೆ.
ವಿಮಾನದೊಳಗೆ ಅತಿಥಿಗಳ ಸಮ್ಮುಖದಲ್ಲಿ ಮದುವೆಯಾದ ಜೋಡಿ
ವಿಮಾನದೊಳಗೆ ಅತಿಥಿಗಳ ಸಮ್ಮುಖದಲ್ಲಿ ಮದುವೆಯಾದ ಜೋಡಿ

ಮಧುರೈ: ಮದುವೆ ಸ್ವರ್ಗದಲ್ಲಿ ನಡೆಯುತ್ತದೆ ಎನ್ನುತ್ತಾರೆ, ಆದರೆ ಇದು ನಡೆದಿದ್ದು ಆಕಾಶದಲ್ಲಿ ವಿಮಾನದ ಒಳಗೇ.

ಈಗ ಕೊರೋನಾ ಬಂದ ಮೇಲೆ ಮದುವೆ ಇನ್ನಿತರ ಶುಭ ಸಮಾರಂಭಗಳನ್ನು ನಡೆಸುವುದು ಜನರಿಗೆ ಸವಾಲಾಗಿದೆ, ಎಲ್ಲಿ ಮಾಡುವುದು, ಹೇಗೆ ಮಾಡುವುದು, ಅತಿಥಿಗಳನ್ನು ಸೇರಿಸುವುದು ಹೇಗೆ, ಯಾರನ್ನು ಬರಹೇಳುವುದು, ಲಾಕ್ ಡೌನ್ ಮಧ್ಯೆ ಮದುವೆಗೆ ಬೇಕಾದ ವಸ್ತುಗಳನ್ನು ತರುವುದು ಹೇಗೆ, ಕೊರೋನಾ ನಿಯಮವನ್ನು ಪಾಲಿಸಿಕೊಂಡು ಮದುವೆ ಕಾರ್ಯಕ್ರಮ ನಡೆಸುವುದು ಹೇಗೆ ಇತ್ಯಾದಿ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ.

ಇವುಗಳ ಮಧ್ಯೆ ತಮಿಳು ನಾಡಿನ ಮಧುರೈಯಲ್ಲಿ ಜೋಡಿಯೊಂದು ಇವ್ಯಾವುದರ ಕಿರಿಕಿರಿಯಿಲ್ಲದೆ ಭರ್ಜರಿಯಾಗಿ ಆಕಾಶದಲ್ಲಿ ನಿನ್ನೆ ಮದುವೆಯಾಗಿದ್ದಾರೆ. ಈ ಜೋಡಿ ಖಾಸಗಿಯಾಗಿ ಬಳಸುವ ಚಾರ್ಟರ್ಡ್ ಫ್ಲೈಟ್ ನಲ್ಲಿ ಹತ್ತಿ ವಿಮಾನ ಸರಿಯಾಗಿ ಮಧುರೈ ಮೀನಾಕ್ಷಿ ಅಮ್ಮ ದೇವಸ್ಥಾನದ ಮೇಲೆ ಹಾರಿಹೋಗುವಾಗ ದೇವಿಯ ಆಶೀರ್ವಾದ ಸಿಗಲಿ ಎಂದು ವಿಮಾನದೊಳಗೆ 161 ಮಂದಿ ಸಮ್ಮುಖದಲ್ಲಿ ಹೂ ಹಾರ ಬದಲಿಸಿಕೊಂಡು, ಮದುಮಗ ಮದುಮಗಳಿಗೆ ತಾಳಿ ಕಟ್ಟುವ ಮೂಲಕ ವಿವಾಹ ಬಂಧನಕ್ಕೊಳಗಾಗಿದ್ದಾರೆ.

ತಮಿಳು ನಾಡು ಸೇರಿದಂತೆ ಎಲ್ಲೆಡೆ ಈಗ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದೆ, ಈ ನಿಟ್ಟಿನಲ್ಲಿ ರಾಜ್ಯಗಳು ಲಾಕ್ ಡೌನ್ ಘೋಷಿಸಿ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುವಂತೆ ಸೂಚನೆ ಹೊರಡಿಸುತ್ತಿವೆ. ತಮಿಳು ನಾಡಿನಲ್ಲಿ ಕೂಡ ನಿಯಮ ಜಾರಿಯಲ್ಲಿದೆ. ಹೀಗಿರುವಾಗ ವಿಮಾನದಲ್ಲಿ ಇಷ್ಟೊಂದು ಮಂದಿ ಪ್ರಯಾಣಿಸಿ ಮದುವೆಯಾಗಿದ್ದು ನಿಯಮ ಉಲ್ಲಂಘನೆಯಲ್ಲವೇ ಎಂಬ ಮಾತುಗಳು ಕೇಳಿಬರುತ್ತಿವೆ. ಮದುವೆಗೆ 50 ಜನರನ್ನು ಮಾತ್ರ ಸೇರಿಸಲು ಸರ್ಕಾರದ ನಿಯಮವಿರುವುದು, ಆದರೆ ಈ ವಿಮಾನದೊಳಗೆ 161 ಮಂದಿಯಿದ್ದರು. ಇದು ನಿಯಮ ಉಲ್ಲಂಘನೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಿನ್ನೆ ಬೆಳಗ್ಗೆ 7 ಗಂಟೆಗೆ ಮಧುರೈ ಮೀನಾಕ್ಷಿ ವಿಮಾನ ನಿಲ್ದಾಣದಿಂದ ಈ 'ಮದುವೆ ವಿಮಾನ 'ಹೊರಟಿದೆ. ಆಕಾಶದಲ್ಲಿ ಎರಡು ಗಂಟೆ ಹಾರಾಟ ನಡೆಸಿದ ವಿಮಾನ ಮಧುರೈ ಮೀನಾಕ್ಷಿ ದೇವಸ್ಥಾನದ ಮೇಲೆ ಹಾರುವಾಗ ಜೋಡಿ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಮದುವೆಯಲ್ಲಿ ಭಾಗವಹಿಸಿದವರು ಮಾಸ್ಕ್ ಕೂಡ ಸರಿಯಾಗಿ ಧರಿಸಿರಲಿಲ್ಲ. ಸಾಮಾಜಿಕ ಅಂತರವಂತೂ ದೂರದ ಮಾತಾಗಿತ್ತು.

ಇದೀಗ ಫೋಟೋ, ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮಿಶ್ರ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗುತ್ತಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಇಂತಹ ಭರ್ಜರಿ ಮದುವೆ ಬೇಕಾಗಿರಲಿಲ್ಲ ಎಂದು ಹಲವರ ಅಭಿಪ್ರಾಯವಾಗಿದೆ.

ಇದೊಂದು ವಿಚಿತ್ರ ಕೊರೋನಾ ನಿಯಮ ಉಲ್ಲಂಘನೆಯಾಗಿರುವುದರಿಂದ ನಗರ ಪ್ರದೇಶ ಅಥವಾ ಗ್ರಾಮಾಂತರ ಪ್ರದೇಶ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಬೇಕೆ ಎಂದು ನಿರ್ಧಾರ ಕೈಗೊಂಡಿಲ್ಲ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಸುಜಿತ್ ಕುಮಾರ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣ ನಿರ್ದೇಶಕ ಎಸ್ ಸೆಂತಿಲ್ ವಲವನ್, ಖಾಸಗಿ ವಿಮಾನಯಾನ ಸಂಸ್ಥೆ ಚಾರ್ಟರ್ಡ್ ಫ್ಲೈಟ್ ಸೇವೆಗೆ ಅರ್ಜಿ ಸಲ್ಲಿಸಿದ್ದರು, ಅದಕ್ಕೆ ವಿಮಾನ ನಿಲ್ದಾಣ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ವಿಮಾನ ಹಾರಾಟ ಮಧ್ಯೆ ಮದುವೆ ಕಾರ್ಯಕ್ರಮದ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ. ಕೋವಿಡ್ ಮುನ್ನೆಚ್ಚರಿಕೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಇಲ್ಲಿ ಆಗಿದೆ, ಇಂದು ಸಾಯಂಕಾಲದೊಳಗೆ ವಿಮಾನಯಾನ ಸೇವಾ ಅಧಿಕಾರಿಗಳಿಗೆ ಘಟನೆ ಬಗ್ಗೆ ವಿವರಣೆ ನೀಡಲು ಕೇಳಿದ್ದೇನೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯೆ ನೀಡಿ ತನಿಖೆ ನಡೆಯುತ್ತಿದ್ದು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ತನಿಖೆ ಆರಂಭ: ವಿಮಾನದಲ್ಲಿ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ತನಿಖೆ ಆರಂಭಿಸಿದ್ದು, ವಿಮಾನದೊಳಗಿದ್ದ ಎಲ್ಲಾ ಪ್ರಯಾಣಿಕರ ವಿರುದ್ಧ ಕೇಸು ದಾಖಲಿಸುವಂತೆ ಸೂಚಿಸಿದ್ದಾರೆ.

ವಿಮಾನದೊಳಗಿದ್ದ ಪ್ರಯಾಣಿಕರ ವಿಚಾರಣೆ ನಡೆಸಲಾಗುತ್ತಿದೆ. ಕೋವಿಡ್ ನಿಯಮ ಪಾಲಿಸದಿದ್ದ ಕಾರಣ ದೂರು ದಾಖಲಿಸಲಾಗುತ್ತಿದೆ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com