ಆಶ್ಚರ್ಯ! ದೇಶದಲ್ಲಿ 18-44 ವರ್ಷದೊಳಗಿನವರಿಗೆ ಹೆಚ್ಚು ಲಸಿಕೆ ಹಾಕುವಲ್ಲಿ ಬಿಹಾರ ನಂ.1 ರಾಜ್ಯ!

ದೇಶದಲ್ಲಿ 18-44 ವರ್ಷದೊಳಗಿನವರಿಗೆ ಲಸಿಕೆ ಹಾಕುವಲ್ಲಿ ಬಿಹಾರ ನಂಬರ್ ಒನ್ ರಾಜ್ಯವಾಗಿದೆ. ಈ ಗುಂಪಿನ 15,27,000 ಜನರಿಗೆ ಬಿಹಾರ ಈಗಾಗಲೇ ಲಸಿಕೆ ಹಾಕಿದೆ.
ಲಸಿಕಾ ಕೇಂದ್ರದ ಬಳಿ ಬಿಹಾರದ ಯುವಕರ ಚಿತ್ರ
ಲಸಿಕಾ ಕೇಂದ್ರದ ಬಳಿ ಬಿಹಾರದ ಯುವಕರ ಚಿತ್ರ

ಪಾಟ್ನಾ: ದೇಶದಲ್ಲಿ 18-44 ವರ್ಷದೊಳಗಿನವರಿಗೆ ಲಸಿಕೆ ಹಾಕುವಲ್ಲಿ ಬಿಹಾರ ನಂಬರ್ ಒನ್ ರಾಜ್ಯವಾಗಿದೆ. ಈ ಗುಂಪಿನ 15,27,000 ಜನರಿಗೆ ಬಿಹಾರ ಈಗಾಗಲೇ ಲಸಿಕೆ ಹಾಕಿದೆ. ಉತ್ತರ ಪ್ರದೇಶದಲ್ಲಿ 15,14,761 ಮತ್ತು ರಾಜಸ್ಥಾನದಲ್ಲಿ 14,91,581 ಜನರಿಗೆ ಲಸಿಕೆ ಹಾಕಲಾಗಿದೆ.  ಒಂದು ಮಿಲಿಯನ್ ಜನರಿಗೆ ಲಸಿಕೆ ಹಾಕುವ ಮೂಲಕ ಗುಜರಾತ್ ನಾಲ್ಕನೇ ಸ್ಥಾನದಲ್ಲಿದೆ.

ಲಸಿಕೆ ಆರಂಭಿಸಿದ ಕಳೆದ 16 ದಿನಗಳಲ್ಲಿಯೇ ಬಿಹಾರ ದೇಶದಲ್ಲಿಯೇ ನಂಬರ್ ಒನ್ ರಾಜ್ಯವಾಗಿದೆ. ಕೇಂದ್ರ ಸರ್ಕಾರದಿಂದ 3.50 ಲಕ್ಷ ಡೋಸ್ ಲಸಿಕೆ ಬರುವುದರೊಂದಿಗೆ ಮೇ 9 ರಂದು ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿತ್ತು. 18-44 ವರ್ಷದೊಳಗಿನವರಿಗೆ ಲಸಿಕೆ ನೀಡುವಲ್ಲಿ ಆದ್ಯತೆ ನೀಡಲಾಗಿತ್ತು. 

ಮೇ 1 ರಂದು ಕೇಂದ್ರ ಸರ್ಕಾರ ಈ ಗುಂಪಿನವರಿಗೆ ಲಸಿಕೆ ಘೋಷಿಸಿದ ನಂತರ ರಾಜ್ಯದಾದ್ಯಂತ ಸುಮಾರು 624 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಲಸಿಕೆ ಹಾಕುವ ಬಗ್ಗೆ ಅರೆವೈದ್ಯಕೀಯ ಮತ್ತಿತರ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿತ್ತು ಎಂದು ಬಿಹಾರ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ್ ಅಮೃತ್ ಹೇಳಿದ್ದಾರೆ. 

ಮೇ 9 ರಂದು ಮೊದಲ ದಿನ 18-44 ವರ್ಷದೊಳಗಿನ 79,238 ಜನರಿಗೆ ಲಸಿಕೆ ನೀಡಲಾಗಿತ್ತು. ಇದೀಗ ಅದು 15 ಲಕ್ಷದ 32 ಸಾವಿರಕ್ಕೆ ತಲುಪಿದೆ. ಪಾಟ್ನಾ ವಿಮಾನ ನಿಲ್ದಾಣಕ್ಕೆ ಲಸಿಕೆ ಬಂದ ಕೂಡಲೇ ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಡೋಸ್ ಕಳುಹಿಸಲಾಯಿತು. 5.25 ಕೋಟಿ ಯುವ ಜನಾಂಗಕ್ಕೆ ಲಸಿಕೆ ಹಾಕಲು ಗುರುತಿಸಲಾಗಿತ್ತು. ಕೊರೋನಾದಿಂದ ಹೊರಬರುವ ನಿಶ್ಚಯದಿಂದ ರಾಜ್ಯದಾದ್ಯಂತ ವಾಪಕ ರೀತಿಯಲ್ಲಿ ಜನರಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ರಾಜ್ಯಾದಾದ್ಯಂತ ಜಾಗೃತಿ ಮೂಡಿಸುವ ಮೂಲಕ ಲಸಿಕೆ ಪಡೆಯುವಂತೆ ಯುಜ ಜನತೆಯನ್ನು ಪ್ರೇರಿಪಿಸಲಾಯಿತು. 28 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜುಲೈ 10ರೊಳಗೆ ಈ ಗುಂಪಿನ ಎಲ್ಲರಿಗೂ ಲಸಿಕೆ ಹಾಕಲಾಗುವುದು, ಇದಕ್ಕಾಗಿ ಜನರಿಗೆ ಲಸಿಕೆ ಹಾಕಲು ಡೋಸ್ ನೊಂದಿಗೆ  ಲಸಿಕಾ ಎಕ್ಸ್ ಪ್ರೆಸ್ ವಾಹನವನ್ನು ಕಳುಹಿಸಲಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಎಲ್ಲಾ ವಯಸ್ಸಿನ ಜನರಿಂದ ಲಸಿಕೆ ಪಡೆಯಲು ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಪ್ರತ್ಯಯ್ ಅಮೃತ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com