ಬಾರ್ಜ್ ದುರಂತ: 66 ಶವಗಳ ಪತ್ತೆ, 20 ಮಂದಿ ಇನ್ನೂ ನಾಪತ್ತೆ, ಸಮುದ್ರದಾಳದಲ್ಲಿ ಮುಳುಗು ತಜ್ಞರಿಂದ ತೀವ್ರ ಶೋಧ
ಟೌಕ್ಟೇ ಚಂಡಮಾರುತಕ್ಕೆ ಸಿಲುಕಿ ಮುಳುಗಡೆಯಾಗಿದ್ದ ಪಿ305 ಬಾರ್ಜ್ ಮತ್ತು ವರಪ್ರದ ಟಗ್ ಬೋಟ್ ದುರಂತ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 66ಕ್ಕೆ ಏರಿಕೆಯಾಗಿದ್ದು, ಇನ್ನೂ 20 ಮಂದಿ ನಾಪತ್ತೆಯಾಗಿದ್ದಾರೆ.
Published: 28th May 2021 11:22 AM | Last Updated: 28th May 2021 11:22 AM | A+A A-

ಟೌಕ್ಟೆ ಚಂಡಮಾರುತ: ಬಾರ್ಜ್ ದುರಂತ
ಮುಂಬೈ: ಟೌಕ್ಟೇ ಚಂಡಮಾರುತಕ್ಕೆ ಸಿಲುಕಿ ಮುಳುಗಡೆಯಾಗಿದ್ದ ಪಿ305 ಬಾರ್ಜ್ ಮತ್ತು ವರಪ್ರದ ಟಗ್ ಬೋಟ್ ದುರಂತ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 66ಕ್ಕೆ ಏರಿಕೆಯಾಗಿದ್ದು, ಇನ್ನೂ 20 ಮಂದಿ ನಾಪತ್ತೆಯಾಗಿದ್ದಾರೆ.
ದುರಂತ ಸಂಭವಿಸಿ 6 ದಿನಗಳೇ ಕಳೆದರೂ ಮೃತದೇಹಗಳ ಶೋಧ ಕಾರ್ಯಾಚರಣೆ ಮಾತ್ರ ಇನ್ನೂ ನಿಂತಿಲ್ಲ. ಗುರುವಾರ ಮತ್ತೆ 6 ಮೃತದೇಹಗಳು ಪತ್ತೆಯಾಗಿದ್ದು, ಆ ಮೂಲಕ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಪತ್ತೆಯಾಗಿರುವ ಮೃತದೇಹಗಳು ವರಪ್ರದ ಟಗ್ ಬೋಟ್ ನಲ್ಲಿದ್ದ ಸಿಬ್ಬಂದಿಗಳದ್ದು ಎನ್ನಲಾಗಿದೆ. ಅಂತೆಯೇ ಇನ್ನೂ 20 ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವವರ ಪತ್ತೆಗಾಗಿ ಮುಳುಗು ತಜ್ಞರನ್ನು ನಿಯೋಜಿಸಲಾಗಿದ್ದು, ಸಮುದ್ರದಾಳದಲ್ಲಿ ಮುಳುಗು ತಜ್ಞರು ತೀವ್ರ ಶೋಧ ನಡೆಸಿದ್ದಾರೆ.
ಶೋಧ ಕಾರ್ಯಾಚರಣೆ ಮುಂದುವರೆಸಿದ ಭಾರತೀಯ ನೌಕಾಪಡೆ
ಇನ್ನು ದುರಂತ ಸಂಭವಿಸಿದ ಸಮುದ್ರ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ 2 ನೌಕೆಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ. ಭಾರತೀಯ ನೌಕಾಪಡೆಯ ಐಎನ್ಎಸ್ ಮಕರ್ ಮತ್ತು ಐಎನ್ಎಸ್ ತರಸಾ ನೌಕೆಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇದೇ ತಂಡದಲ್ಲಿ ಮುಳುಗು ತಜ್ಞರು ಶೋಧ ನಡೆಸಿದ್ದಾರೆ.
ಬಾರ್ಜ್ ಪಿ 305ಯಲ್ಲಿದ್ದ 261 ಸಿಬ್ಬಂದಿಗಳ ಪೈಕಿ ಈವರೆಗೆ 186 ಜನರನ್ನು ರಕ್ಷಿಸಲಾಗಿದೆ. ಅಂತೆಯೇ ದುರಂತದಲ್ಲಿ 66 ಮಂದಿ ಮೃತಪಟ್ಟಿದ್ದು, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ವರಪ್ರದ ಟಗ್ ಬೋಟ್ ನಲ್ಲಿದ್ದ 13 ಜನರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. 11 ಮಂದಿ ನಾಪತ್ತೆಯಾಗಿದ್ದಾರೆ.