'ಯಾಸ್' ಚಂಡಮಾರುತದಿಂದ ಹಾನಿ: ಒಡಿಶಾಗೆ ಪ್ರಧಾನಿ ಮೋದಿ ಆಗಮನ; ಮುಖ್ಯಮಂತ್ರಿಗಳೊಂದಿಗೆ ಸಭೆ

ಯಾಸ್ ಚಂಡಮಾರುತ ನಂತರ ಆಗಿರುವ ಹಾನಿ ಮತ್ತು ಪರಿಸ್ಥಿತಿಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಭುವನೇಶ್ವರದಲ್ಲಿಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆ ಪರಾಮರ್ಶೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
ಭುವನೇಶ್ವರದಲ್ಲಿಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆ ಪರಾಮರ್ಶೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ಭುವನೇಶ್ವರ: ಯಾಸ್ ಚಂಡಮಾರುತ ನಂತರ ಆಗಿರುವ ಹಾನಿ ಮತ್ತು ಪರಿಸ್ಥಿತಿಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಇಂದು ಬೆಳಗ್ಗೆ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರನ್ನು ರಾಜ್ಯಪಾಲ ಗಣೇಶಿ ಲಾಲ್, ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಕೇಂದ್ರ ಸಚಿವರುಗಳಾದ ಧರ್ಮೇಂದ್ರ ಪ್ರಧಾನ್ ಮತ್ತು ಪ್ರತಾಪ್ ಸಾರಂಗಿ ಬರಮಾಡಿಕೊಂಡರು.

ವಿಮಾನ ನಿಲ್ದಾಣದ ಕಾನ್ಫರೆನ್ಸ್ ಹಾಲ್ ನಲ್ಲಿ ಪ್ರಧಾನಿಯವರ ಸಮ್ಮುಖದಲ್ಲಿ ಸಭೆ ನಡೆಯುತ್ತಿದೆ. ಗಂಟೆಗೆ 145 ಕಿಲೋ ಮೀಟರ್ ವೇಗದಲ್ಲಿ ಭಾರತದ ಪೂರ್ವ ಕರಾವಳಿಗೆ ಮೊನ್ನೆ ಬುಧವಾರ ಬಂದಪ್ಪಳಿಸಿದ ಯಾಸ್ ಚಂಡಮಾರುತದಿಂದ ನಾಲ್ವರು ಮೃತಪಟ್ಟಿದ್ದು ಸಾಕಷ್ಟು ಮನೆಗಳು ಹಾನಿಗೀಡಾಗಿವೆ. ನೆರೆ ಬಂದು ರೈತರ ಜಮೀನುಗಳು ಕೊಚ್ಚಿ ಹೋಗಿವೆ.

ಇದಕ್ಕೂ ಮೊದಲು ಭದ್ರತೆ ಕಾರಣದಿಂದ ಪಶ್ಚಿಮ ಬಂಗಾಳ,ಒಡಿಶಾ ಮತ್ತು ಜಾರ್ಖಂಡ್ ನ 21 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ಚಂಡಮಾರುತ ಅಪ್ಪಳಿಸಿದ ನಂತರ ನಿನ್ನೆ ರಾಜ್ಯಾದ್ಯಂತ ಭಾರೀ ಮಳೆಯಾಗಿದ್ದು ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿದಿದೆ. ಒಡಿಶಾದ ನಾಲ್ಕು ಜಿಲ್ಲೆಗಳಾದ ಭದ್ರಕ್, ಕೆಂದ್ರಪಾರ, ಕಿಯೊಂಜಿಹಾರ್ ಮತ್ತು ಜೈಪುರಗಳಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿತ್ತು.

ಇಂದು ಅಪರಾಹ್ನ ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಹಾನಿ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com