ರಾಮ್ ದೇವ್ ಹೇಳಿಕೆ ವಿರೋಧಿಸಿ ದೇಶಾದ್ಯಂತ ವೈದ್ಯರ ಪ್ರತಿಭಟನೆ 

ಯೋಗ ಗುರು ಬಾಬಾ ರಾಮ್ ದೇವ್ ಅಲೋಪತಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುವುದಕ್ಕೆ ವೈದ್ಯರು ನಿರ್ಧರಿಸಿದ್ದಾರೆ.
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್

ನವದೆಹಲಿ: ಯೋಗ ಗುರು ಬಾಬಾ ರಾಮ್ ದೇವ್ ಅಲೋಪತಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುವುದಕ್ಕೆ ವೈದ್ಯರು ನಿರ್ಧರಿಸಿದ್ದಾರೆ.

ಜೂ.1 ರಂದು ಕರಾಳ ದಿನ (ಬ್ಲಾಕ್ ಡೇ) ಯನ್ನಾಗಿ ಆಚರಣೆ ಮಾಡುವುದರ ಮೂಲಕ ವೈದ್ಯರು ರಾಮ್ ದೇವ್ ಅವರ ಹೇಳಿಕೆಗೆ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ವೈದ್ಯರ ಸಂಘಟನೆ ಈ ಬಗ್ಗೆ ಮಾಹಿತಿ ನೀಡಿದ್ದು, ರಾಮ್ ದೇವ್ ಅವರಿಂದ ಬಹಿರಂಗ, ಬೇಷರತ್ ಕ್ಷಮೆಯನ್ನು ಅಪೇಕ್ಷಿಸಿದೆ. 

ಕೊರೋನಾ ಚಿಕಿತ್ಸೆಗೆ ಅಲೋಪತಿ ಔಷಧವನ್ನು ಪ್ರಶ್ನಿಸಿದ್ದ ರಾಮ್ ದೇವ್, ಕೋವಿಡ್-19 ಗೆ ಅಲೋಪತಿ ಔಷಧವನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದು ಅಲೋಪತಿ ವೈದ್ಯರ ಕೆಂಗಣ್ಣಿಗೆ ಗುರಿಯಾಗಿತ್ತು. 
 
ಈ ಘಟನೆ ವರದಿಯಾಗುತ್ತಿದ್ದಂತೆಯೇ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬಾಬಾ ರಾಮ್ ದೇವ್ ಅವರ ಹೇಳಿಕೆ ದುರದೃಷ್ಟಕರ ಎಂದು ಹೇಳಿ, ಹೇಳಿಕೆಯನ್ನು ವಾಪಸ್ ಪಡೆಯುವಂತೆ ಕೇಳಿದ್ದರು. 

ಭಾನುವಾರದಂದು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ರಾಮ್ ದೇವ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದರು. ಇದಾದ ಬಳಿಕ ಐಎಂಎ ಗೆ ೨೫ ಪ್ರಶ್ನೆಗಳನ್ನು ಟ್ವಿಟರ್ ಮೂಲಕ ಬಹಿರಂಗ ಪತ್ರದಲ್ಲಿ ಕೇಳಿದ್ದ ಬಾಬಾ ರಾಮ್ ದೇವ್, ಅಲೋಪತಿ ರೋಗಗಳಿಗೆ ಶಾಶ್ವತ ಪರಿಹಾರ ನೀಡುತ್ತದೆಯೋ ಅಥವಾ ನೋವಿಗೆ ಮಾತ್ರ ಪರಿಹಾರ ನೀಡುತ್ತದೆಯೋ ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com