'ಭಾರತ ಈಗ 10 ಪಟ್ಟು ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುತ್ತಿದೆ': ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ 

ಕೋವಿಡ್-19 ಎರಡನೇ ಅಲೆ ವಿರುದ್ಧ ದೇಶ ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಹೋರಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಕೋವಿಡ್-19 ಎರಡನೇ ಅಲೆ ವಿರುದ್ಧ ದೇಶ ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಹೋರಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಆಕಾಶವಾಣಿಯ ಜನಪ್ರಿಯ ತಮ್ಮ ತಿಂಗಳ ಕೊನೆಯ ಭಾನುವಾರದ ಮನದ ಮಾತು ಕಾರ್ಯಕ್ರಮದಲ್ಲಿ ಅವರು ಮುಖ್ಯವಾಗಿ ಕೋವಿಡ್ ಎರಡನೇ ಅಲೆ, ಅದರ ವಿರುದ್ಧ ದೇಶ ಹೇಗೆ ಹೋರಾಡುತ್ತಿದೆ, ಸರ್ಕಾರ ಏನು ಮಾಡುತ್ತಿದೆ, ಎರಡು ಚಂಡಮಾರುತಗಳನ್ನು ದೇಶ ಹೇಗೆ ಎದುರಿಸಿದೆ ಎಂಬುದರ ಬಗ್ಗೆಯೇ ಹೆಚ್ಚು ಮಾತನಾಡಿದ್ದಾರೆ. ದೇಶದ ಹಲವು ವರ್ಗದ ನಾಗರಿಕರ ಜೊತೆ ಮಾತನಾಡಿದ್ದಾರೆ.

ಕೋವಿಡ್ 2ನೇ ಅಲೆಯ ಸಮಯದಲ್ಲಿ ಮೆಡಿಕಲ್ ಆಕ್ಸಿಜನ್ ನ್ನು ಮೂಲೆಮೂಲೆಗಳಿಗೆ ತಲುಪಿಸುವುದು ಬಹಳ ದೊಡ್ಡ ಸವಾಲಾಗಿತ್ತು. ಈ ಸವಾಲಿಗೆ ಪ್ರತಿಯಾಗಿ ಕ್ರೈಯೊಜೆನಿಕ್ ಆಕ್ಸಿಜನ್ ಟ್ಯಾಂಕರ್ ಗಳ ಮೂಲಕ ಚಾಲಕರು ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಲಕ್ಷಾಂತರ ಜನರ ಜೀವವನ್ನು ಕಾಪಾಡಿದ್ದಾರೆ ಎಂದರು.

ಕೊರೋನಾದಿಂದ ತಮ್ಮವರನ್ನು ಕಳೆದುಕೊಂಡವರಿಗೆ ನಾನು ಈ ಸಂದರ್ಭದಲ್ಲಿ ಸಂತಾಪಗಳನ್ನು ಸೂಚಿಸುತ್ತೇನೆ. ತಮ್ಮವರನ್ನು ಕಳೆದುಕೊಂಡವರ ಪರವಾಗಿ ನಾವು ಈ ಸಂದರ್ಭದಲ್ಲಿ ನಿಲ್ಲುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ. 

ಕೊರೋನಾ ಬಗ್ಗೆ ಪ್ರಧಾನಿ ಮನದ ಮಾತು: ತನ್ನೆಲ್ಲಾ ಶಕ್ತಿಗಳನ್ನು ಒಗ್ಗೂಡಿಸಿ ದೇಶ ಕೊರೋನಾ ವಿರುದ್ಧ ಹೇಗೆ ಹೋರಾಡುತ್ತಿದೆ ಎಂದು ನಾವೆಲ್ಲರೂ ನೋಡುತ್ತಿದ್ದೇವೆ. ಕಳೆದ 100 ವರ್ಷಗಳಲ್ಲಿ ಇದು ಅತಿ ದೊಡ್ಡ ಸಾಂಕ್ರಾಮಿಕ ರೋಗವಾಗಿದ್ದು ಈ ವರ್ಷದ ಕೊರೋನಾ ಎರಡನೇ ಅಲೆಯ ಜೊತೆಗೆ ದೇಶ ಈ ಬಾರಿ ಚಂಡಮಾರುತದಂತಹ ಪ್ರಕೃತಿ ವಿಕೋಪವನ್ನು ಕಂಡಿದೆ. ಪ್ರವಾಹ ಪೀಡಿತ ರಾಜ್ಯಗಳು ಧೈರ್ಯದಿಂದ ಶಿಸ್ತು ಮತ್ತು ತಾಳ್ಮೆಯಿಂದ ಹೋರಾಟ ನಡೆಸಿದ್ದಾರೆ. ಚಂಡಮಾರುತದ ಪ್ರವಾಹ ಸಮಯದಲ್ಲಿ ಸಕ್ರಿಯವಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಯನ್ನು ನಾನು ವಿನಯಪೂರ್ವಕವಾಗಿ ಪ್ರಮಾಣ ಹೇಳುತ್ತೇನೆ ಎಂದರು.

ಕಳೆದ ಹತ್ತು ದಿನಗಳಲ್ಲಿ ಯಾಸ್ ಮತ್ತು ಟೌಕ್ಟೇ ಎಂಬ ಎರಡು ದೊಡ್ಡ ಚಂಡಮಾರುತ ಎದುರಿಸಿದ್ದೇವೆ. ಈ ಎರಡೂ ಚಂಡಮಾರುತಗಳಿಂದ ಸಾಕಷ್ಟು ರಾಜ್ಯಗಳಿಗೆ ಹಾನಿಯಾಗಿದೆ.ಈ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ, ಸಮಯಕ್ಕೆ ಸರಿಯಾಗಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಚಂಡಮಾರುತದಿಂದ ಭಾರೀ ಸಂಖ್ಯೆಯ ಜೀವಹಾನಿಯನ್ನು ತಪ್ಪಿಸಲಾಗಿದೆ. ಈ ಹಿಂದಿನ ಪ್ರಾಕೃತಿಕ ವಿಕೋಪಗಳಿಗೆ ಹೋಲಿಸಿದರೆ ಈಗ ಸಾವು, ನೋವು ಹಾನಿಯ ಪ್ರಮಾಣ ಕಡಿಮೆಯಾಗಿದೆ ಎಂದರು.

ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತಗಳು ಒಟ್ಟಾಗಿ ಬಂದು ಸೇರಿ ಎದುರಿಸಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ನನ್ನ ಧನ್ಯವಾದಗಳು.

ನಮ್ಮ ಮುಂದಿನ ಸವಾಲುಗಳು ಎಷ್ಟೇ ದೊಡ್ಡದಾಗಿರಲಿ, ಭಾರತದ ವಿಜಯ ಸಂಕಲ್ಪ ಪ್ರಮಾಣದಲ್ಲಿ ಸಮನಾಗಿರುತ್ತದೆ. ಪ್ರತಿ ಚಂಡಮಾರುತ, ಬಿರುಗಾಳಿ ಎದುರಾದಾಗಲೂ ದೇಶದ ನಾಗರಿಕರ ಸಾಮೂಹಿಕ ಶಕ್ತಿ ಮತ್ತು ಸೇವೆಯ ಸ್ಪೂರ್ತಿ ದೇಶವನ್ನು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕಾಪಾಡಿದೆ.

ಇದುವರೆಗೆ 33 ಕೋಟಿಗೂ ಅಧಿಕ ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದೆ. ಕರೋನಾದ ಆರಂಭದಲ್ಲಿ, ದೇಶದಲ್ಲಿ ಕೇವಲ ಒಂದು ಪರೀಕ್ಷಾ ಪ್ರಯೋಗಾಲಯವಿತ್ತು ಆದರೆ ಇಂದು 2500 ಕ್ಕೂ ಹೆಚ್ಚು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಆರಂಭದಲ್ಲಿ ಒಂದು ದಿನದಲ್ಲಿ ಕೆಲವೇ ನೂರು ಪರೀಕ್ಷೆಗಳನ್ನು ಮಾತ್ರ ನಡೆಸಬಹುದಿತ್ತು, ಈಗ ಒಂದು ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಸಾಮಾನ್ಯ ಸಂದರ್ಭಗಳಲ್ಲಿ ನಾವು ಒಂದು ದಿನದಲ್ಲಿ 900 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುತ್ತಿದ್ದೆವು. ಈಗ, ಇದು ಸಾಮಾನ್ಯ ಉತ್ಪಾದನೆ 15 ಕ್ಕಿಂತ 10 ಪಟ್ಟು ಹೆಚ್ಚು ಉತ್ಪಾದಿಸಲು ಮತ್ತು ದಿನಕ್ಕೆ ಸುಮಾರು 9500 ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸಲು ವಿಸ್ತರಿಸಿದೆ ಎಂದರು.

ಸ್ನೇಹಿತರೇ, ನಮ್ಮ ಈ ಯೋಧರಿಗೆ ಅವರು ಮಾಡಿದ ಕೆಲಸಕ್ಕೆ ರಾಷ್ಟ್ರವು ನಮಸ್ಕರಿಸುತ್ತದೆ. ಅಂತೆಯೇ, ಲಕ್ಷಾಂತರ ಜನರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅವರು ಮಾಡುವ ಕಾರ್ಯಗಳು ಅವರ ದಿನಚರಿಯ ಕೆಲಸದ ಭಾಗವಲ್ಲ, ಆದರೂ ಮಾಡುತ್ತಿದ್ದಾರೆ, ಅವರಿಗೆ ನಿಜಕ್ಕೂ ಧನ್ಯವಾದ ಹೇಳಲೇಬೇಕು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com