ಖಾಸಗಿ ಆಸ್ಪತ್ರೆಗಳು ಸ್ಟಾರ್ ಹೊಟೇಲ್ ಗಳ ಜೊತೆ ಸೇರಿಕೊಂಡು ಕೋವಿಡ್ ಲಸಿಕೆ ಪ್ಯಾಕೇಜ್ ನೀಡುವ ಮೂಲಕ ಮಾರ್ಗಸೂಚಿ ಉಲ್ಲಂಘಿಸುತ್ತಿವೆ: ಕೇಂದ್ರ ಸರ್ಕಾರ
ಸ್ಟಾರ್ ಹೊಟೇಲ್ ಗಳ ಜೊತೆ ಸೇರಿಕೊಂಡು ಖಾಸಗಿ ಆಸ್ಪತ್ರೆಗಳು ಕೋವಿಡ್-19 ಪ್ಯಾಕೇಜ್ ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇದು ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನದ ಮಾರ್ಗಸೂಚಿಗೆ ವಿರುದ್ಧವಾಗಿದ್ದು ತಕ್ಷಣವೇ ನಿಲ್ಲಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
Published: 30th May 2021 10:01 AM | Last Updated: 30th May 2021 10:21 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಸ್ಟಾರ್ ಹೊಟೇಲ್ ಗಳ ಜೊತೆ ಸೇರಿಕೊಂಡು ಖಾಸಗಿ ಆಸ್ಪತ್ರೆಗಳು ಕೋವಿಡ್-19 ಪ್ಯಾಕೇಜ್ ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇದು ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನದ ಮಾರ್ಗಸೂಚಿಗೆ ವಿರುದ್ಧವಾಗಿದ್ದು ತಕ್ಷಣವೇ ನಿಲ್ಲಿಸಬೇಕೆಂದು ಆದೇಶ ಹೊರಡಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯ, ಕೆಲವು ಸ್ಟಾರ್ ಹೊಟೇಲ್ ಗಳ ಜೊತೆ ಸೇರಿಕೊಂಡು ಕೋವಿಡ್ ಲಸಿಕೆ ಪ್ಯಾಕೇಜ್ ಗಳನ್ನು ಕೆಲವು ಖಾಸಗಿ ಆಸ್ಪತ್ರೆಗಳು ನೀಡುತ್ತಿರುವುದು ಗಮನಕ್ಕೆ ಬಂದಿದೆ. ರಾಷ್ಟ್ರೀಯ ಕೋವಿಡ್ ಲಸಿಕೆ ಕಾರ್ಯಕ್ರಮ ಮಾರ್ಗಸೂಚಿಗೆ ಇದು ವಿರುದ್ಧವಾಗಿದೆ. ಸ್ಟಾರ್ ಹೊಟೇಲ್ ಗಳಲ್ಲಿ ನಡೆಸಿರುವ ಲಸಿಕೆ ಅಭಿಯಾನವು ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾಗಿದ್ದು ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ ಮನೋಹರ್ ಅಗ್ನಾನಿ ಪತ್ರದಲ್ಲಿ ತಿಳಿಸಿದ್ದಾರೆ. ಇಂತಹ ಸಂಸ್ಥೆಗಳ ವಿರುದ್ಧ ಕೂಡಲೇ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಸೂಚಿಸಲಾಗಿದೆ.
ಕೋವಿಡ್ ಲಸಿಕೆ ಅಭಿಯಾನದ ಮಾರ್ಗಸೂಚಿ ಪ್ರಕಾರ, ಲಸಿಕೆಗಳನ್ನು ಇಲ್ಲಿ ನೀಡಬಹುದು. ಸರ್ಕಾರಿ ಕೋವಿಡ್ ಕೇಂದ್ರಗಳಲ್ಲಿ, ಖಾಸಗಿ ಆಸ್ಪತ್ರೆಗಳ ಕೋವಿಡ್ ಕೇಂದ್ರಗಳಲ್ಲಿ, ಸರ್ಕಾರಿ ಕಚೇರಿಗಳ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಅದು ಸರ್ಕಾರಿ ಆಸ್ಪತ್ರೆಗಳು ನಡೆಸುವುದಾಗಿದ್ದರೆ ಮತ್ತು ಖಾಸಗಿ ಆಸ್ಪತ್ರೆಗಳಿಂದ ಖಾಸಗಿ ಕಂಪೆನಿಗಳಲ್ಲಿ, ಗ್ರೂಪ್ ಹೌಸಿಂಗ್ ಸೊಸೈಟಿಗಳಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಕೋವಿಡ್ ಲಸಿಕೆ ಕೇಂದ್ರದ ಹತ್ತಿರ, ಆರ್ ಡಬ್ಲ್ಯುಎ ಕಚೇರಿಗಳಲ್ಲಿ, ಸಮುದಾಯ ಕೇಂದ್ರಗಳಲ್ಲಿ, ಪಂಚಾಯತ್ ಭವನಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ, ವೃದ್ಧಾಶ್ರಮಗಳಲ್ಲಿ ತಾತ್ಕಾಲಿಕವಾಗಿ ಕೋವಿಡ್ ಲಸಿಕೆ ಅಭಿಯಾನವನ್ನು ಕೈಗೊಳ್ಳಬಹುದು.
ಇದಕ್ಕೆ ಹೊರತಾಗಿ, ಬೇರೆ ಯಾವುದೇ ಸ್ಥಳಗಳಲ್ಲಿ ಲಸಿಕೆ ಅಭಿಯಾನವನ್ನು ಕೈಗೊಳ್ಳುವಂತಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಲಸಿಕೆ ಅಭಿಯಾನ ನಡೆಯುತ್ತದೆಯೇ ಎಂದು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ನೋಡಿಕೊಳ್ಳಬೇಕೆಂದು ಅಗ್ನಾನಿ ಪತ್ರದಲ್ಲಿ ಸೂಚಿಸಿದ್ದಾರೆ.