ನ. 8 ರಿಂದ ಕೇಂದ್ರ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಮರು ಜಾರಿ
ನವೆಂಬರ್ 8 ರಿಂದ ಜಾರಿಯಾಗುವಂತೆ ತನ್ನ ಎಲ್ಲ ಹಂತದ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದಾಗಿ ಸಿಬ್ಬಂದಿ ಸಚಿವಾಲಯ ಸೋಮವಾರ ಹೇಳಿದೆ.
Published: 01st November 2021 05:36 PM | Last Updated: 01st November 2021 05:36 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ನವೆಂಬರ್ 8 ರಿಂದ ಜಾರಿಯಾಗುವಂತೆ ತನ್ನ ಎಲ್ಲ ಹಂತದ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದಾಗಿ ಸಿಬ್ಬಂದಿ ಸಚಿವಾಲಯ ಸೋಮವಾರ ಹೇಳಿದೆ.
ಬಯೋಮೆಟ್ರಿಕ್ ಮೆಷೀನ್ ಬಳಿ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಮಾಡುವುದು ಆಯಾ ಇಲಾಖೆಗಳ ಮುಖ್ಯಸ್ಥರ ಹೊಣೆಗಾರಿಕೆ, ಸಿಬ್ಬಂದಿ ಹಾಜರಾತಿ ನೀಡುವ ಮೊದಲು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡಿರಬೇಕು ಎಂದು ಹೇಳಿದೆ.
ಕೊರೋನಾವೈರಸ್ ಸಾಂಕ್ರಾಮಿಕ ಕಾರಣದಿಂದಾಗಿ ಸಿಬ್ಬಂದಿಗೆ ಇದುವರೆಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ವಿನಾಯಿತಿ ನೀಡಲಾಗಿತ್ತು. ಹಾಜರಾತಿ ವೇಳೆ ಸಿಬ್ಬಂದಿ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಅಗತ್ಯವಿದ್ದರೆ ದಟ್ಟಣೆ ತಪ್ಪಿಸಲು ಹೆಚ್ಚುವರಿ ಯಂತ್ರವನ್ನು ಅಳವಡಿಸಬೇಕು ಎಂದು ಸಚಿವಾಲಯ ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯ ಹಾಗೂ ಇಲಾಖೆಗೆ ನೀಡಿರುವ ಆದೇಶದಲ್ಲಿ ತಿಳಿಸಿದೆ.
ಕೆಲಸದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಚೇರಿ ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಬಹುದಾಗಿದೆ. ಸಾರ್ವಜನಿಕ ಹಿತಾದೃಷ್ಟಿಯಿಂದ ಅನಗತ್ಯ ಎಂದಾದಲ್ಲಿ ವ್ಯಕ್ತಿಗತ ಭೇಟಿ ಕೈ ಬಿಡಬಹುದೆಂದು ಆದೇಶದಲ್ಲಿ ಹೇಳಲಾಗಿದೆ.