ತೆಲಂಗಾಣ ಉಪ ಚುನಾವಣೆ: ಆಡಳಿತಾರೂಢ ಟಿಆರ್ ಎಸ್ ಗೆ ಮುಖಭಂಗ, ಹುಜೂರಾಬಾದ್ ನಲ್ಲಿ ಬಿಜೆಪಿ ಭರ್ಜರಿ ಜಯ

ತೆಲಂಗಾಣ ಉಪ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ ಎಸ್ ಗೆ ತೀವ್ರ ಮುಖಭಂಗವಾಗಿದ್ದು, ಹುಜೂರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಈಟೆಲ ರಾಜೇಂದರ್ ಅವರು ಭರ್ಜರಿ ಜಯ ಗಳಿಸಿದ್ದಾರೆ.
ಈಟೆಲ ರಾಜೇಂದರ್
ಈಟೆಲ ರಾಜೇಂದರ್

ಹೈದರಾಬಾದ್: ತೆಲಂಗಾಣ ಉಪ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ ಎಸ್ ಗೆ ತೀವ್ರ ಮುಖಭಂಗವಾಗಿದ್ದು, ಹುಜೂರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಈಟೆಲ ರಾಜೇಂದರ್ ಅವರು ಭರ್ಜರಿ ಜಯ ಗಳಿಸಿದ್ದಾರೆ.

ಈ ಹಿಂದೆ ಸಿಎಂ ಚಂದ್ರಶೇಖರ್ ರಾವ್ ಅವರ ತೆಲಂಗಾಣ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಈಟೆಲ ರಾಜೇಂದರ್ ಅವರನ್ನು ಭೂಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಸಂಪುಟದಿಂದ ಕೈ ಬಿಡಲಾಗಿತ್ತು. ಬಳಿಕ ಈಟಲ ರಾಜೇಂದರ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಹಿನ್ನಲೆಯಲ್ಲಿ ಅವರು ಪ್ರತಿನಿಧಿಸುತ್ತಿದ್ದ ಹುಜೂರಾಬಾದ್ ನಲ್ಲಿ ಉಪ ಚುನಾವಣೆ ಎದುರಾಗಿತ್ತು. 

ಇಂದು ಈ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ತಮ್ಮ ಹುಜೂರಾಬಾದ್ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಈಟಲ ರಾಜೇಂದರ್ ಅವರು ಯಶಸ್ವಿಯಾಗಿದ್ದಾರೆ. ತಮ್ಮ ಸಮೀಪದ ಅಭ್ಯರ್ಥಿ ಟಿಆರ್ಎಸ್ ನ ಗೆಲ್ಲು ಶ್ರೀನಿವಾಸ್ ಯಾದವ್ ಅವರನ್ನು 24,068 ಮತಗಳ ಅಂತರದಿಂದ ಸೋಲಿಸಿದ್ದಾರೆ. ಆ ಮೂಲಕ 2004 ರಿಂದ ಹುಜೂರಾಬಾದ್ ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಿದ್ದಾರೆ.

ಒಟ್ಟು ಚಲಾವಣೆಯಾದ ಮತಗಳಲ್ಲಿ ಈಟೆಲ ರಾಜೇಂದರ್ 1,06,780 ಮತಗಳನ್ನು ಪಡೆದರೆ, ಶ್ರೀನಿವಾಸ್ ಯಾದವ್ 82,712 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವೆಂಕಟ್ ನರಸಿಂಗ್ ರಾವ್ 3,012 ಮತಗಳನ್ನು ಪಡೆದರು.

2018 ರಲ್ಲಿ, ರಾಜೇಂದರ್ ಹುಜೂರಾಬಾದ್ ಅನ್ನು ಉಳಿಸಿಕೊಂಡಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೌಶಿಕ್ ರೆಡ್ಡಿ ಅವರನ್ನು 43,000 ಮತಗಳಿಂದ ಸೋಲಿಸಿದ್ದರು. ಟಿಆರ್‌ಎಸ್ ಅಭ್ಯರ್ಥಿಯಾಗಿದ್ದ ರಾಜೇಂದರ್ 1,04,840 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ 61,121 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಪಿ.ರಘು ಕೇವಲ 1,683 ಮತಗಳನ್ನು ಪಡೆದು, ನೋಟಾ ಮತಗಳಿಗಿಂತ (2,867) ಕಡಿಮೆಯಾಗಿತ್ತು. ಕೌಶಿಕ್ ರೆಡ್ಡಿ ಇತ್ತೀಚೆಗೆ ಕಾಂಗ್ರೆಸ್ ತೊರೆದು ಟಿಆರ್‌ಎಸ್ ಸೇರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com