102 ಟ್ವಿಟರ್ ಖಾತೆಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲು

ತ್ರಿಪುರಾ ಪೊಲೀಸರು 102 ಟ್ವಿಟರ್ ಖಾತೆಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿದ್ದಾರೆ. 
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಯುಎಪಿಎ
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಯುಎಪಿಎ

ತ್ರಿಪುರಾ: ತ್ರಿಪುರಾ ಪೊಲೀಸರು 102 ಟ್ವಿಟರ್ ಖಾತೆಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿದ್ದಾರೆ. 

ಉತ್ತರ ತ್ರಿಪುರಾದ ಪಾಣೀಸಾಗರ್ ನಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್ ಖಾತೆಗಳ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದ ಆರೋಪದಡಿ 102 ಟ್ವಿಟರ್ ಖಾತೆಗಳ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ ಎಂದು ತ್ರಿಪುರಾ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿಷ್ಮಾನ್ ದಾಸ್ ಚೌಧರಿ ಮಾಹಿತಿ ನೀಡಿದ್ದಾರೆ. 

"ಪೊಲೀಸರು ತನಿಖೆ ನಡೆಸುತ್ತಿರುವ ಪ್ರಕರಣಗಳನ್ನು ಈಗ ತ್ರಿಪುರಾ ಪೊಲೀಸ್ ಇಲಾಖೆಯ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ, ಟ್ವೀಟ್ ಖಾತೆಯ  ಹ್ಯಾಂಡ್ಲರ್ ಗಳನ್ನು ಪತ್ತೆ ಮಾಡುವುದಕ್ಕೆ ಪೊಲೀಸರು ಯತ್ನಿಸುತ್ತಿದ್ದಾರೆ" ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ರಾಜ್ಯದ ಹಲವೆಡೆ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಈ ತಿಂಗಳು 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ತ್ರಿಪುರಾ ಐಜಿ (ಕಾನೂನು ಸುವ್ಯವಸ್ಥೆ ವಿಭಾಗದ ಉಸ್ತುವಾರಿ) ಸೌರಭ್ ತ್ರಿಪಾಠಿ ಕಳೆದ ತಿಂಗಳು ಈ ಬಗ್ಗೆ ಮಾತನಾಡಿ, "ಕೆಲವು ರಾಷ್ಟ್ರವಿರೋಧಿ ಹಾಗೂ ಗೊಂದಲ ಉಂಟುಮಾಡುವ ಶಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ತ್ರಿಪುರಾದ ಪಾಣೀಸಾಗರ್ ನಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದ ನಕಲಿ ವಿಡಿಯೋಗಳನ್ನು ಹಂಚಿಕೆ ಮಾಡಿ ಸಮಾಜದ ಶಾಂತಿ ಹದಗೆಡಿಸಲು ಯತ್ನಿಸಿದ್ದರು ಎಂದು ಹೇಳಿದ್ದಾರೆ.

ತ್ರಿಪುರಾದಲ್ಲಿ ಮಸೀದಿಯ ಬಳಿ ಅಗ್ನಿ ಅವಗಢ ಸಂಭವಿಸಿಲ್ಲ. ಏನೇ ಅವಘಡ ಸಂಭವಿಸಿದ್ದರೂ ಅದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ನಕಲಿ ಮಾಹಿತಿಗಳ ಬಗ್ಗೆಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಐಜಿ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com