ತಮಿಳುನಾಡಿನಲ್ಲಿ ಮಳೆ ಆರ್ಭಟ: ನಾಲ್ವರು ಸಾವು, 9 ಜಿಲ್ಲೆಗಳಲ್ಲಿ ಶಾಲೆಗಳು ಬಂದ್

ತಮಿಳುನಾಡಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಅನೇಕ ಜಿಲ್ಲೆಗಳಲ್ಲಿ ಶಾಲಾ- ಕಾಲೇಜ್ ಗಳು ಬಂದ್ ಸೇರಿದಂತೆ ವಿವಿಧ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈವರೆಗೂ ಮಳೆ ಸಂಬಂಧಿತ ಘಟನೆಗಳಿಂದ ನಾಲ್ವರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾರೆ. ರಾಜ್ಯಾದ್ಯಂತ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳು ನಡೆಯುತ್ತಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ತಮಿಳುನಾಡಿನಲ್ಲಿ ಭಾರೀ ಮಳೆಯ ಚಿತ್ರ
ತಮಿಳುನಾಡಿನಲ್ಲಿ ಭಾರೀ ಮಳೆಯ ಚಿತ್ರ

ಚೆನ್ನೈ:  ತಮಿಳುನಾಡಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಅನೇಕ ಜಿಲ್ಲೆಗಳಲ್ಲಿ ಶಾಲಾ- ಕಾಲೇಜ್ ಗಳು ಬಂದ್ ಸೇರಿದಂತೆ ವಿವಿಧ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈವರೆಗೂ ಮಳೆ ಸಂಬಂಧಿತ ಘಟನೆಗಳಿಂದ ನಾಲ್ವರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾರೆ. ರಾಜ್ಯಾದ್ಯಂತ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳು ನಡೆಯುತ್ತಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. 

ತಡರಾತ್ರಿ ರಾಜಧಾನಿ ಚೆನ್ನೈನಲ್ಲಿ ವರುಣ ಬಿಡುವು ಕೊಟ್ಟಿದ್ದಾನೆ. ಆದರೆ, ಈರೋಡ್, ತಿರವರೂರ್ ಸೇರಿದಂತೆ ತಮಿಳುನಾಡಿನ ಇತರೆ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಮುಂದುವರಿದಿರುವ ಬಗ್ಗೆ ವರದಿಗಳು ಬಂದಿವೆ. ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿನಲ್ಲಿ ನಾಲ್ಕು ತಂಡಗಳನ್ನು ನಿಯೋಜನೆ ಮಾಡಿದೆ. ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಯಲ್ಲಿ ತಲಾ ಒಂದು ಹಾಗೂ ಮಧುರೈನಲ್ಲಿ 2 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.

ರಾಜಧಾನಿ ಚೆನ್ನೈ, ಸೆಲಂ, ತಿರುಚ್ಚಿ, ಕಂಚೀಪುರಂ, ತಿರುವಳ್ಳೂರು, ಚೆಂಗಲ್ ಪೇಟ್, ಶಿವಗಂಗಾ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಶಾಲೆಗಳನ್ನು ಮುಚ್ಚಲಾಗಿದೆ.  ಇಂದು ಬಹುತೇಕ ಸರ್ಕಾರಿ ಕಚೇರಿಗಳು ಬಂದ್ ಆಗಿವೆ.  ಖಾಸಗಿ ಸಂಸ್ಥೆಗಳು ತನ್ನ ನೌಕರರಿಗೆ ರಜೆ ಘೋಷಿಸಬೇಕು ಇಲ್ಲವೇ ಮನೆಯಿಂದ ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಒತ್ತಾಯಿಸಿದ್ದಾರೆ. 

ಚೆನ್ನೈನಲ್ಲಿ ಭಾರೀ ಮಳೆಯಿಂದ ಅನೇಕ ವೃತ್ತಗಳು ಜಲಾವೃತಗೊಂಡು, ಬಸ್ ಮತ್ತು ರೈಲು ಸೇವೆ ಅಸ್ತವ್ಯವಸ್ಥೆಗೊಂಡಿತ್ತು. ವಿಮಾನ ಸೇವೆಯಲ್ಲೂ ವ್ಯತ್ಯಯ ಕಂಡುಬಂದಿತು.  ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.  

ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com