ಬ್ರಾಹ್ಮಣರು ಮತ್ತು ಬನಿಯಾಗಳು' ನನ್ನ ಎರಡು ಜೇಬಿನಲ್ಲಿದ್ದಾರೆ: ಬಿಜೆಪಿ ಮುಖಂಡ ಮುರಳೀಧರ ರಾವ್ ಹೇಳಿಕೆ
ಬಿಜೆಪಿ ಜಾತಿಗಳ ಹೆಸರಿನಲ್ಲಿ ಮತ ಕೇಳಲು ಕಾರಣವೇನು ಎಂಬ ಪ್ರಶ್ನೆಗೆ ಸೋಮವಾರ ಮಧ್ಯಪ್ರದೇಶದ ಬಿಜೆಪಿ ಉಸ್ತುವಾರಿ ಪಿ ಮುರಳೀಧರ ರಾವ್ ಅವರು ವಿವಾದಾದ್ಮಕ ಉತ್ತರ ನೀಡಿದ್ದಾರೆ.
Published: 09th November 2021 11:53 AM | Last Updated: 09th November 2021 01:43 PM | A+A A-

ಮುರುಳೀಧರ ರಾವ್
ಭೋಪಾಲ್: ಬಿಜೆಪಿ ಜಾತಿಗಳ ಹೆಸರಿನಲ್ಲಿ ಮತ ಕೇಳಲು ಕಾರಣವೇನು ಎಂಬ ಪ್ರಶ್ನೆಗೆ ಸೋಮವಾರ ಮಧ್ಯಪ್ರದೇಶದ ಬಿಜೆಪಿ ಉಸ್ತುವಾರಿ ಪಿ ಮುರಳೀಧರ ರಾವ್ ಅವರು ವಿವಾದಾದ್ಮಕ ಉತ್ತರ ನೀಡಿದ್ದಾರೆ.
ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಮುರಳೀಧರ್ ರಾವ್ ನೀಡಿದ ಉತ್ತರದ ವೀಡಿಯೊ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ.
ಪತ್ರಿಕಾಗೋಷ್ಠಿಯಲ್ಲಿ, ಎಸ್‌ಟಿ/ಎಸ್‌ಸಿ ಮತ್ತು ಒಬಿಸಿ ಜನಸಂಖ್ಯೆಯನ್ನು ಕೇಂದ್ರೀಕರಿಸುವ ಬಿಜೆಪಿಯ ಭವಿಷ್ಯದ ಕಾರ್ಯತಂತ್ರದ ಕುರಿತು ರಾವ್ ಮಾತನಾಡಿದರು.
ಇಲ್ಲಿಯವರೆಗೆ ಬ್ರಾಹ್ಮಣರು ಮತ್ತು ಬನಿಯಾಗಳ (ಮೇಲ್ವರ್ಗದ ವರ್ತಕ ಸಮುದಾಯ) ಪಕ್ಷ ಎಂದು ಕರೆಯಲಾಗುತ್ತಿದ್ದ ಬಿಜೆಪಿ ಈಗ ಎಸ್‌ಸಿ/ಎಸ್‌ಟಿ/ಒಬಿಸಿ ಪಕ್ಷವಾಗಲಿದೆಯೇ ಎಂಬ ಪ್ರಶ್ನೆಗೆ, ರಾವ್ ಅವರು ಹಿಂದಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಕುರ್ತಾದ ಎರಡು ಪಾಕೆಟ್‌ಗಳನ್ನು ತೋರಿಸುತ್ತಾ 'ಬ್ರಾಹ್ಮಣರು' ಮತ್ತು 'ಬನಿಯಾಗಳು' ನನ್ನ ಎರಡು ಜೇಬಿನಲ್ಲಿದ್ದಾರೆಂದು ಉತ್ತರ ನೀಡಿದ್ದಾರೆ.
ಅವರ ಈ ಹೇಳಿಕೆ ವಿರುದ್ಧ ವಿಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ. ಮುರಳೀಧರ ವಿರುದ್ಧ ವಾಗ್ದಾಳಿ ನಡೆಸಿದ ಕಮಲ್ ನಾಥ್, "ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಘೋಷಣೆಯನ್ನು ನೀಡುವ ಬಿಜೆಪಿಯ ಮಧ್ಯಪ್ರದೇಶದ ಉಸ್ತುವಾರಿ, ಈಗ ನಾವು ಒಂದು ಜೇಬಿನಲ್ಲಿ ಬ್ರಾಹ್ಮಣರು ಮತ್ತು ಒಂದು ಕಿಸೆಯಲ್ಲಿ ಬನಿಯಾ ಎಂದು ಹೇಳುತ್ತಿದ್ದಾರೆ.
ಇದು ಈ ಸಮುದಾಯಗಳಿಗೆ ಮಾಡಿದ ದೊಡ್ಡ ಅವಮಾನ. ಮತದಾರರು ಪಕ್ಷದ ಆಸ್ತಿಯಾಗಬೇಕು. ಆದರೆ ಬಿಜೆಪಿ ಜೇಬಿನಲ್ಲಿದ್ದಾರೆ ಎಂದು ಹೇಳುತ್ತದೆ. ಬಿಜೆಪಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಮುದಾಯಗಳಿಗೆ ಇದು ಯಾವ ರೀತಿಯ ಗೌರವವಾಗಿದೆ. ಬಿಜೆಪಿ ನಾಯಕರು ಅಧಿಕಾರ ಮತ್ತು ಅಹಂಕಾರದ ಅಮಲಿನಲ್ಲಿದ್ದಾರೆ. ಇದು ಇಡೀ ಬ್ರಾಹ್ಮಣ ಮತ್ತು ಬನಿಯಾ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು, ಬಿಜೆಪಿ ನಾಯಕತ್ವವು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವ ಘೋಷಣೆಯನ್ನು ನೀಡುವ ಬಿಜೆಪಿ ಜನರನ್ನು ಈಗ ನಿರ್ದಿಷ್ಟ ಗುಂಪುಗಳನ್ನು ಕೇಂದ್ರೀಕರಿಸುವ ಮತ್ತು ಎರಡು ಸಮುದಾಯಗಳನ್ನು ಅವಮಾನಿಸುವ ಮಾತನಾಡುತ್ತಿದ್ದಾರೆ. ಇದು ಯಾವ ರೀತಿಯ ಮನಸ್ಥಿತಿ. ಅಧಿಕಾರದ ಹಸಿವಿನಲ್ಲಿ ಬಿಜೆಪಿ ಯಾವ ಹಂತಕ್ಕೂ ಹೋಗಬಹುದು. ಅದರ ನೀತಿಗಳು, ವರ್ತನೆ ಮತ್ತು ತತ್ವಶಾಸ್ತ್ರವು ಅಧಿಕಾರಕ್ಕೆ ಸೀಮಿತವಾಗಿದೆ" ಎಂದು ಕಮಲ್ ನಾಥ್ ಆರೋಪಿಸಿದ್ದಾರೆ.