ಉದ್ದೇಶ ಘೋಷಣೆ ಇಲ್ಲದೇ ಎನ್ ಜಿಒ ಗಳಿಗೆ ವಿದೇಶಿ ದೇಣಿಗೆ ಸ್ವೀಕರಿಸಲು ಅನುಮತಿ ಅಸಾಧ್ಯ: ಸುಪ್ರೀಂ ಕೋರ್ಟ್
ಯಾವುದೇ ಎನ್ ಜಿಒ ಗಳು ವಿದೇಶಿ ದೇಣಿಗೆ ಸ್ವೀಕರಿಸಬೇಕಾದರೆ ಆ ದೇಣಿಗೆಯ ಬಳಕೆಯ ಉದ್ದೇಶ ಹಾಗೂ ಗುರಿಯನ್ನು ಘೋಷಣೆ ಮಾಡಬೇಕು ಇಲ್ಲದೇ ಇದ್ದಲ್ಲಿ ವಿದೇಶಿ ದೇಣಿಗೆಯನ್ನು ಸ್ವೀಕರಿಸುವುದಕ್ಕೆ ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Published: 09th November 2021 10:04 PM | Last Updated: 10th November 2021 01:57 PM | A+A A-

ಸುಪ್ರೀಂ ಕೋರ್ಟ್
ನವದೆಹಲಿ: ಯಾವುದೇ ಎನ್ ಜಿಒ ಗಳು ವಿದೇಶಿ ದೇಣಿಗೆ ಸ್ವೀಕರಿಸಬೇಕಾದರೆ ಆ ದೇಣಿಗೆಯ ಬಳಕೆಯ ಉದ್ದೇಶ ಹಾಗೂ ಗುರಿಯನ್ನು ಘೋಷಣೆ ಮಾಡಬೇಕು ಇಲ್ಲದೇ ಇದ್ದಲ್ಲಿ ವಿದೇಶಿ ದೇಣಿಗೆಯನ್ನು ಸ್ವೀಕರಿಸುವುದಕ್ಕೆ ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾ.ಎ.ಎಂ ಖಾನ್ವಾಲಿಕರ್ ಅವರಿದ್ದ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನನ್ನು ನಿಜವಾದ ಮನೋಭಾವದಲ್ಲಿ ಅನುಸರಿಸಲಾಗುತ್ತಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ವಿದೇಶಿ ದೇಣಿಗೆಯನ್ನು ಪಡೆಯುವ ಎನ್ ಜಿಒಗಳು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದೆ.
ಈ ಹಿಂದೆ ಕಾನೂನನ್ನು ಪಾಲಿಸಲು ಸಾಧ್ಯವಾಗದೇ ಇರಬಹುದು ಆದರೆ ಇನ್ನು ಮುಂದೆಯಾದರೂ ಎನ್ ಜಿಒಗಳು ಯಾವ ಉದ್ದೇಶಕ್ಕಾಗಿ ಹಣ ಪಡೆಯುತ್ತವೆಯೋ ಅವುಗಳಿಗೆ ಮಾತ್ರವೇ ಹಣ ಬಳಕೆಯಾಗುವಂತೆ ಕೇಂದ್ರ ಸರ್ಕಾರ ನಿಗಾ ವಹಿಸಬೇಕೆಂದು ಕೋರ್ಟ್ ಹೇಳಿದೆ.
ನಿರ್ದಿಷ್ಟ ಉದ್ದೇಶವನ್ನು ಘೋಷಣೆ ಮಾಡದೇ ಎನ್ ಜಿಒ ಗಳಿಗೆ ಹಣ, ದೇಣಿಗೆ ನೀಡಿದರೆ, ಅದನ್ನು ಬೇರೆ ಉದ್ದೇಶಕ್ಕಾಗಿ, ಎನ್ ಜಿಒ ನೋಂದಣಿಯಾಗದೇ ಇರುವ ಉದ್ದೇಶಗಳಿಗೆ ಬಳಕೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದ್ದು, ಈ ಲೋಪವನ್ನು ಸರಿಪಡಿಸಬೇಕಿದ್ದು ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಹೇಳಿದೆ.