ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ: ಉತ್ತರ ಪ್ರದೇಶ ಸರ್ಕಾರದ ಅಧೀನ ಕಾರ್ಯದರ್ಶಿ ಮಟ್ಟದ ಅಧಿಕಾರಿ ಬಂಧನ

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಉತ್ತರ ಪ್ರದೇಶ ಸರ್ಕಾರದ ಅಧೀನ ಕಾರ್ಯದರ್ಶಿ ಮಟ್ಟದ ಅಧಿಕಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಉತ್ತರ ಪ್ರದೇಶ ಸರ್ಕಾರದ ಅಧೀನ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಯು ತನಗೆ ದೀರ್ಘಕಾಲ ಕಿರುಕುಳ ನೀಡಿದ್ದಾನೆ ಮತ್ತು ವಿಷಯ ತಿಳಿಸಿದರೆ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿರುವ ಮಹಿಳೆ, ಪೊಲೀಸರು ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದಾಗ ಹತಾಶೆಯಿಂದ ಸ್ವತಃ ವೀಡಿಯೊ ಮಾಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ರಾಜ್ಯ ರಾಜಧಾನಿಯ ಹಲವಾರು ಸರ್ಕಾರಿ ಕಚೇರಿಗಳನ್ನು ಹೊಂದಿರುವ ಬಾಪು ಭವನದಲ್ಲಿ ಈ ಘಟನೆ ನಡೆದಿದ್ದು, ರಾಜ್ಯ ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಅಧಿಕಾರಿಯ ವಿರುದ್ಧ ಅಕ್ಟೋಬರ್ 29 ರಂದು ಹುಸೈಂಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಮತ್ತು ಅದಕ್ಕೆ ಪೂರಕವಾಗಿ ಅನೇಕ ವೀಡಿಯೊಗಳನ್ನು ನೀಡಿದ್ದೇನೆ. ಆದರೆ ಎಫ್‌ಐಆರ್ ದಾಖಲಿಸಿದ್ದರೂ ಅಧಿಕಾರಿಯನ್ನು ಬಂಧಿಸಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಲೈಂಗಿಕ ಕಿರುಕುಳ ನೀಡಿದ ಅಧಿಕಾರಿಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹುಸೇನಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಆರೋಪಿಯನ್ನು ಬಂಧಿಸಿದ ನಂತರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಘಟನೆಯು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಹೇಳಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, "ಅದು ಸೆಕ್ರೆಟರಿಯೇಟ್ ಆಗಿರಲಿ, ರಸ್ತೆ ಅಥವಾ ಇನ್ನಾವುದೇ ಸ್ಥಳವಾಗಿರಬಹುದು: ಉತ್ತರ ಪ್ರದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಇದು ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡುವ ಸರ್ಕಾರದ ವಾಸ್ತವ" ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com