ತೀವ್ರಗೊಂಡ ಹಿಂದುತ್ವ-ಹಿಂದೂ ಧರ್ಮದ ಚರ್ಚೆ: ಛಿದ್ರವಾದ ಕಾಂಗ್ರೆಸ್, ನಾಯಕರಲ್ಲಿ ಒಡಕು!
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನಾರಂಭ ಮಾಡಿದ ಹಿಂದುತ್ವ-ಹಿಂದೂ ಧರ್ಮದ ಚರ್ಚೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದ್ದ ಒಗ್ಗಟ್ಟನ್ನು ಛಿದ್ರಗೊಳಿಸಿದಂತೆ ಕಾಣುತ್ತಿದೆ.
Published: 18th November 2021 10:07 AM | Last Updated: 18th November 2021 10:12 AM | A+A A-

ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾಧ್ರ
ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನಾರಂಭ ಮಾಡಿದ ಹಿಂದುತ್ವ-ಹಿಂದೂ ಧರ್ಮದ ಚರ್ಚೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದ್ದ ಒಗ್ಗಟ್ಟನ್ನು ಛಿದ್ರಗೊಳಿಸಿದಂತೆ ಕಾಣುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ನಾಯಕರು ಚುನಾವಣೆ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ? ಎಂದು ಕೇಳುತ್ತಿದ್ದರೆ, ಮತ್ತೊಂದಷ್ಟು ಮಂದಿ, ಬಿಜೆಪಿ ವಿರುದ್ಧದ ಹೋರಾಟದಲ್ಲಿ, ಚುನಾವಣೆ ಸಂದರ್ಭಗಳಲ್ಲಿ, ನಾವೂ ಇದ್ದೀವಿ ಅಂತ ತೋರಿಸಿಕೊಳ್ಳೋದಕ್ಕೆ ಪಕ್ಷ ಈ ವಿಷಯದ ಬಗ್ಗೆ ಮಾತಡಲೇಬೇಕು ಎಂಬ ನಿಲುವನ್ನು ಹೊಂದಿದ್ದಾರೆ.
ಅಮಾಯಕರನ್ನು ಕೊಲ್ಲುವುದು ಹಿಂದೂ ಧರ್ಮದ ಲಕ್ಷಣವಲ್ಲ, ಅದು ಹಿಂದುತ್ವದ ಲಕ್ಷಣ ಎಂದು ಹೇಳಿದ್ದ ರಾಹುಲ್ ಗಾಂಧಿ ಹಲವು ವಿರೋಧ, ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ತಮ್ಮದೇ ಪಕ್ಷದ ಕೆಲವು ಮಂದಿಯಿಂದ ವಿರೋಧ ಎದುರಿಸಬೇಕಾಗುವಂತಾಗಿದ್ದು ಮಾತ್ರ ಅಚ್ಚರಿ.
1/1 InHinduism VS Hindutva debate some people in @INCIndia miss a fundamental point.If I were to believe that my religious identity should be basis of my politics then I should be in A Majoritarian or Minoritarian Political Party.I am in @INCIndia because I believe in Nehruvian
— Manish Tewari (@ManishTewari) November 17, 2021
ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ, ಸಂಸದ ಮನೀಷ್ ತಿವಾರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಪಕ್ಷ ನೆಹರು ಅವರ ಜಾತ್ಯತೀತ ತತ್ವ ಸಿದ್ಧಾಂತಗಳಿಂದ ವಿಪಥಗೊಳ್ಳುತ್ತಿರುವುದು ಕಾಂಗ್ರೆಸ್ ಕುಸಿತಕ್ಕೆ ಕಾರಣವಾಗುತ್ತಿರಬಹುದು ಎಂದು ಹೇಳಿದ್ದು ತಾವು ಹಿಂದೂ ಧರ್ಮ- ಹಿಂದುತ್ವದ ಚರ್ಚೆಯಿಂದ ಗೊಂದಲಕ್ಕೀಡಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಹಿಂದೂ ಧರ್ಮ-ಹಿಂದುತ್ವದ ಚರ್ಚೆಯ ಭರದಲ್ಲಿ ಕಾಂಗ್ರೆಸ್ ನ ಕೆಲವು ಮಂದಿ ಮೂಲಭೂತ ಅಂಶವನ್ನೇ ಮರೆಯುತ್ತಿರುವಂತಿದೆ. " ಒಂದು ವೇಳೆ ನಾನು ನನ್ನ ರಾಜಕಾರಣಕ್ಕೆ ನನ್ನ ಧಾರ್ಮಿಕ ಗುರುತನ್ನೇ ನಂಬುವುದಾದರೆ ನಾನು ಒಂದೋ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ರಾಜಕೀಯ ಪಕ್ಷದಲ್ಲಿರಬೇಕು. ನಾನು ಧರ್ಮ ಎನ್ನುವುದು ನನ್ನ ಖಾಸಗಿ ವಿಷಯದ ಚಟುವಟಿಕೆಯ ಸ್ಥಳ ಎಂಬ ನೆಹರೂ ಅವರ ತತ್ವ-ಸಿದ್ಧಾಂತವನ್ನು ನಂಬಿರುವುದರಿಂದ ಕಾಂಗ್ರೆಸ್ ನಲ್ಲಿದ್ದೇನೆ ಎಂದು ತಿವಾರಿ ಟ್ವಿಟರ್ ನಲ್ಲಿ ಮಾರ್ಮಿಕವಾಗಿ ನುಡಿದಿದ್ದಾರೆ.
ಕಾಂಗ್ರೆಸ್ ನಲ್ಲಿರುವ ಹಲವು ಮಂದಿ ನಾಯಕರು ವಿಧಾನಸಭಾ ಚುನಾವಣೆಗಳನ್ನು ಮುಂದಿಟ್ಟುಕೊಂಡು ಈ ರೀತಿಯ ಚರ್ಚೆಗಳಿಗೆ ಮುಂದಾಗುವುದು ಆತ್ಮಹತ್ಯೆಯಂತಹ ನಿರ್ಧಾರವಾಗುತ್ತದೆ. ಆದ್ದರಿಂದ ಇಂತಹ ಚರ್ಚೆ, ಹೇಳಿಕೆಗಳಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿಗೂ ಮುನ್ನ ಹಿಂದೂ ಧರ್ಮ- ಹಿಂದುತ್ವದ ವಿಷಯವಾಗಿ ಕಾಂಗ್ರೆಸ್ ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ನೀಡಿರುವ ಹೇಳಿಕೆ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.
ಕಾಂಗ್ರೆಸ್ ನ ಇನ್ನೂ ಹಲವು ನಾಯಕರು ಪಕ್ಷ ಹೀಗಿದ್ದರೆ ಆಗುವುದಿಲ್ಲ. ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಮೃದು ಹಿಂದುತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ಹತ್ತಿರವಾಗುವುದು ಉತ್ತಮ ಎಂಬ ಅಭಿಪ್ರಾಯದಲ್ಲಿದ್ದಾರೆ/
"ತಮ್ಮ ಪಕ್ಷ ಕೇವಲ ಅಲ್ಪಸಂಖ್ಯಾತರಿಗಷ್ಟೇ ಎಂಬ ಭಾವನೆ ಹಲವರಲ್ಲಿ ಬಂದರೆ ಜನರನ್ನು ತಮ್ಮತ್ತ ಸೆಳೆಯುವುದು ಕಷ್ಟ. ಕಾಂಗ್ರೆಸ್ ಬಹುಸಂಖ್ಯಾತರಾಗಿರುವ ಹಿಂದೂಗಳನ್ನು ಕಡಗಣಿಸಲು ಸಾಧ್ಯವಿಲ್ಲ. ಚುನಾವಣೆ ಗೆಲ್ಲಲು ಅವರ ಮತಗಳೂ ಮುಖ್ಯ ಹಾಗೆಂದು ಬಿಜೆಪಿ ರೀತಿಯಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ, ಸಿಟ್ಟು ಬಿತ್ತುವ ಕೆಲಸ ಮಾಡಬೇಕಿಲ್ಲ. ಆದರೆ ಖುರ್ಷಿದ್ ನೀಡಿದ ಹೇಳಿಕೆ, ಪ್ರಕಟಿಸಿದ ನಿಲುವುಗಳನ್ನು ವಿರೋಧಿಸಬೇಕು, ಅಂತಹ ಹೇಳಿಕೆಗಳು ನಮ್ಮ ಪಕ್ಷಕ್ಕೆ ಮುಳುವಾಗಲಿದೆ. ನಾವು ಬಹುಸಂಖ್ಯಾತರ ವಿರೋಧಿಗಳೆಂಬ ಹಣೆಪಟ್ಟಿ ನೀಡಲಿದೆ" ಎನ್ನುತ್ತಾರೆ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು.