ತನ್ನ ಅಗತ್ಯದ ಶೇ. 90ರಷ್ಟು ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸಲಿದೆ: ರಾಜನಾಥ್ ಸಿಂಗ್
ಅಗತ್ಯವಿರುವ ರಕ್ಷಣಾ ಉತ್ಪನ್ನಗಳ ಶೇಕಡಾ 90ರಷ್ಟನ್ನು ದೇಶವೇ ಉತ್ಪಾದನೆ ಮಾಡಲಿದ್ದು, 2024-25ರ ಹೊತ್ತಿಗೆ 5 ಬಿಲಿಯನ್ ಅಮೆರಿಕ ಡಾಲರ್ ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವಷ್ಟು ಸಮರ್ಥವಾಗಿ ಬೆಳೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Published: 20th November 2021 09:31 AM | Last Updated: 20th November 2021 01:43 PM | A+A A-

ರಕ್ಷಣಾ ಸಚಿವ ರಾಜನಾಥ್ ಸಿಂಗ್
ಜಾನ್ಸಿ: ಅಗತ್ಯವಿರುವ ರಕ್ಷಣಾ ಉತ್ಪನ್ನಗಳ ಶೇಕಡಾ 90ರಷ್ಟನ್ನು ದೇಶವೇ ಉತ್ಪಾದನೆ ಮಾಡಲಿದ್ದು, 2024-25ರ ಹೊತ್ತಿಗೆ 5 ಬಿಲಿಯನ್ ಅಮೆರಿಕ ಡಾಲರ್ ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವಷ್ಟು ಸಮರ್ಥವಾಗಿ ಬೆಳೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಹಿಂದೆ ಶೇಕಡಾ 65ರಿಂದ ಶೇಕಡಾ 70ರಷ್ಟು ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ, ನಾವು 'ಆತ್ಮನಿರ್ಭರತೆಯತ್ತ (ಸ್ವಾವಲಂಬನೆ) ಸಾಗುತ್ತಿರುವಾಗ, ಶೇಕಡಾ 65ರಷ್ಟು ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಹಿಂದೆ ನಾವು ವಿದೇಶಗಳಿಂದ ಆಮದು ಮೇಲೆ ಹೆಚ್ಚು ಅವಲಂಬಿತವಾಗುತ್ತಿದ್ದೆವು. ಇಂದು ನಾವು 70 ದೇಶಗಳಿಗೆ ರಫ್ತು ಮಾಡುವಷ್ಟು ಬೆಳೆದಿದ್ದೇವೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
"ರಾಷ್ಟ್ರ ರಕ್ಷಾ ಸಮರ್ಪಣ್ ಪರ್ವ್" ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2024-25ರ ಹೊತ್ತಿಗೆ 5 ಬಿಲಿಯನ್ ಡಾಲರ್ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ಗುರಿಯನ್ನು ನಾವು ತಲುಪಲಿದ್ದೇವೆ. ಪ್ರಧಾನಿ ಮೋದಿಯವರು ಇದೇ ಆಶಯವನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ನಾನು ಪ್ರಧಾನಿಯವರಿಗೆ ಭರವಸೆ ನೀಡುತ್ತಿದ್ದೇನೆ, ಇನ್ನು ನಾಲ್ಕೈದು ವರ್ಷಗಳಲ್ಲಿ ಶೇಕಡಾ 90ರಷ್ಟು ರಕ್ಷಣಾ ಉತ್ಪನ್ನಗಳನ್ನು ನಮ್ಮ ಭಾರತದಲ್ಲಿಯೇ ಉತ್ಪಾದಿಸುವಷ್ಟು ನಾವು ಸಮರ್ಥರಾಗುತ್ತೇವೆ ಎಂದರು.
ಇದಕ್ಕೂ ಮುನ್ನ ರಾಣಿ ಲಕ್ಷ್ಮೀಬಾಯಿ ಅವರಿಗೆ ಗೌರವ ನಮನ ಸಲ್ಲಿಸಿದ ರಾಜನಾಥ್ ಸಿಂಗ್, ಒಂದು ಕಾಲದಲ್ಲಿ ಅತಿ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ದೇಶಗಳಲ್ಲಿ ಭಾರತ ಕೂಡ ಒಂದಾಗಿತ್ತು. ಆದರೆ ಇಂದು ಪ್ರಧಾನಿ ಮೋದಿಯವರು ಪ್ರಯತ್ನದಿಂದಾಗಿ ಪರಿಸ್ಥಿತಿ ಬದಲಾಗಿದೆ.ಪ್ರಧಾನಿಯವರು ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡುತ್ತಿರುವುದರಿಂದ ಮಹಿಳೆಯರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ನೇಮಕಗೊಳ್ಳುತ್ತಿದ್ದಾರೆ.
ರಾಣಿ ಲಕ್ಷ್ಮೀಬಾಯಿಯವರ ಸ್ಪೂರ್ತಿಯಿಂದ ಸೇನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಇಂದು ಮುಂದೆ ಬರುತ್ತಿದ್ದಾರೆ ಎಂದು ಸಹ ರಕ್ಷಣಾ ಸಚಿವರು ಶ್ಲಾಘಿಸಿದರು.