ಸಂತರ ಪ್ರತಿಭಟನೆಗೆ ಮಣಿದ ಐಆರ್ ಸಿಟಿಸಿ; Ramayan Express ನ ವೇಯ್ಟರ್ "ವಸ್ತ್ರ" ಸಂಹಿತೆಯಲ್ಲಿ ಬದಲಾವಣೆ!
ರಾಮಾಯಣ ಎಕ್ಸ್ ಪ್ರೆಸ್ ರೈಲು ಇತ್ತೀಚಿನ ದಿನಗಳಲ್ಲಿ ದೇಶದ ಜನರ ಗಮನ ಸೆಳೆಯುತ್ತಿದೆ. ಆದರೆ ಇಲ್ಲಿನ ವ್ಯವಸ್ಥೆಯೊಂದರ ಬಗ್ಗೆ ಮಧ್ಯಪ್ರದೇಶದ ಉಜ್ಜೈನ್ ನಲ್ಲಿ ಸಂತರು, ಸನ್ಯಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರು.
Published: 23rd November 2021 09:07 AM | Last Updated: 23rd November 2021 09:07 AM | A+A A-

ರಾಮಾಯಣ ಎಕ್ಸ್ ಪ್ರೆಸ್ ರೈಲಿನಲ್ಲಿ ವಸ್ತ್ರ ಸಂಹಿತೆ (ಸಂಗ್ರಹ ಚಿತ್ರ)
ನವದೆಹಲಿ: ರಾಮಾಯಣ ಎಕ್ಸ್ ಪ್ರೆಸ್ ರೈಲು ಇತ್ತೀಚಿನ ದಿನಗಳಲ್ಲಿ ದೇಶದ ಜನರ ಗಮನ ಸೆಳೆಯುತ್ತಿದೆ. ಆದರೆ ಇಲ್ಲಿನ ವ್ಯವಸ್ಥೆಯೊಂದರ ಬಗ್ಗೆ ಮಧ್ಯಪ್ರದೇಶದ ಉಜ್ಜೈನ್ ನಲ್ಲಿ ಸಂತರು, ಸನ್ಯಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಸಂತರ ಪ್ರತಿಭಟನೆಗೆ ಮಣಿದಿರುವ ಐಆರ್ ಸಿಟಿಸಿ, ಅವರ ಆಗ್ರಹದ ಪ್ರಕಾರ ರಾಮಾಯಣ ಎಕ್ಸ್ ಪ್ರೆಸ್ ನ ವೇಯ್ಟರ್ "ವಸ್ತ್ರ" ಸಂಹಿತೆಯಲ್ಲಿ ಬದಲಾವಣೆ ಮಾಡುತ್ತಿರುವುದಾಗಿ ಘೋಷಿಸಿದೆ.
ಐಆರ್ ಸಿಟಿಸಿ ನಿರ್ವಹಣೆ ಮಾಡುತ್ತಿರುವ ರಾಮಾಯಣ ಎಕ್ಸ್ ಪ್ರೆಸ್ ರೈಲಿನಲ್ಲಿನ ವೇಯ್ಟರ್ ಗಳಿಗೆ ಕೇಸರಿ ದಿರಿಸುಗಳನ್ನು ವಸ್ತ್ರ ಸಂಹಿತೆಯನ್ನಾಗಿ ನೀಡಲಾಗಿತ್ತು. ಇದರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಂತರು, ಇದು ಹಿಂದೂ ಧರ್ಮಕ್ಕೆ ಮಾಡುತ್ತಿರುವ ಅವಮಾನ ಎಂದು ಅಸಮಾಧಾನ ಹೊರಹಾಕಿದ್ದರು.
ವಸ್ತ್ರ ಸಂಹಿತೆಯನ್ನು ಬದಲಾವಣೆ ಮಾಡದೇ ಇದ್ದಲ್ಲಿ ಡಿ.12 ರಂದು ದೆಹಲಿಯಲ್ಲಿ ರೈಲನ್ನು ತಡೆಯುವುದಾಗಿ ಸಂತರು ಎಚ್ಚರಿಕೆ ನೀಡಿದ್ದರು. "ರಾಮಾಯಣ ಎಕ್ಸ್ ಪ್ರೆಸ್ ರೈಲಿನಲ್ಲಿ ಆಹಾರ ಹಾಗೂ ಇನ್ನಿತರ ಪದಾರ್ಥಗಳನ್ನು ಪ್ರಯಾಣಿಕರಿಗೆ ಪೂರೈಕೆ ಮಾಡುವ ವೇಯ್ಟರ್ ಗಳು ಕೇಸರಿ ದಿರಿಸನ್ನು ಧರಿಸುತ್ತಿರುವುದನ್ನು ವಿರೋಧಿಸಿ ನಾವು ಎರಡು ದಿನಗಳ ಹಿಂದೆ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ವರೆದಿದ್ದರು.
"ಕೇಸರಿ ವಸ್ತ್ರ, ಸಾಧುಗಳ ರೀತಿಯಲ್ಲಿ ಕೇಸರಿ ರುಮಾಲು, ರುದ್ರಾಕ್ಷಿಗಳನ್ನು ಧರಿಸುವುದು ಹಿಂದೂ ಧರ್ಮ ಹಾಗೂ ಸಂತರಿಗೆ ಮಾಡುವ ಅವಮಾನವಾಗಿದೆ" ಎಂದು ಉಜ್ಜೈನ್ ಅಖಾಡ ಪರಿಷತ್ ನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶ್ ಪುರಿ ಹೇಳಿದ್ದರು.
"ವೇಯ್ಟರ್ ಗಳ ವಸ್ತ್ರ ಸಂಹಿತೆಯನ್ನು ಬದಲಾವಣೆ ಮಾಡದೇ ಇದ್ದಲ್ಲಿ ಡಿ.12 ರಂದು ದೆಹಲಿಯ ಸಫ್ದರ್ ಜಂಗ್ ರೈಲ್ವೆ ನಿಲ್ದಾಣದಲ್ಲಿ ರಾಮಾಯಣ ಎಕ್ಸ್ ಪ್ರೆಸ್ ರೈಲನ್ನು ತಡೆಹಿಡಿಯುತ್ತೇವೆ ಹಾಗೂ ರೈಲ್ವೆ ಟ್ರಾಕ್ ಗಳ ಮೇಲೆ ಕುಳಿತು ಪ್ರತಿಭಟನೆ ಮಾಡುತ್ತೇವೆ ಇದು ಹಿಂದೂ ಧರ್ಮದ ರಕ್ಷಣೆಗೆ ಅಗತ್ಯವಾಗಿರುವ ಅಂಶ" ಎಂದು ಅವದೇಶ್ ಪುರಿ ಎಚ್ಚರಿಸಿದ್ದರು.
ಸಂತರ ಪ್ರತಿಭಟನೆಗೆ ಮಣಿದಿರುವ ಐಆರ್ ಸಿಟಿಸಿ ಟ್ವೀಟ್ ಮೂಲಕ ಮಹತ್ವದ ಪ್ರಕಟಣೆಯನ್ನು ತಿಳಿಸಿದ್ದು, "ರಾಮಾಯಣ ಎಕ್ಸ್ ಪ್ರೆಸ್ ರೈಲಿನಲ್ಲಿ ಸೇವೆಗಳನ್ನು ಒದಗಿಸುವ ಸಿಬ್ಬಂದಿಗಳ ವಸ್ತ್ರ ಸಂಹಿತೆಯನ್ನು ವೃತ್ತಿಪರ ದಿರಿಸಿಗೆ ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.